ಶಿವಮೊಗ್ಗ: 5 ಕೋಟಿ ಅಲ್ಲ, 25 ಕೋಟಿ ಮಾನನಷ್ಟ ಮೊಕದ್ದಮೆ ಹಾಕಿದರೂ ಎದುರಿಸಲು ಸಿದ್ಧ – ಶಾಸಕ ಗೋಪಾಲಕೃಷ್ಣ ಬೇಳೂರು

ಶಿವಮೊಗ್ಗ: 5 ಕೋಟಿ ಅಲ್ಲ, 25 ಕೋಟಿ ಮಾನನಷ್ಟ ಮೊಕದ್ದಮೆ ಹಾಕಿದರೂ ಎದುರಿಸಲು ಸಿದ್ಧ – ಶಾಸಕ ಗೋಪಾಲಕೃಷ್ಣ ಬೇಳೂರು

ಶಿವಮೊಗ್ಗ: “5 ಕೋಟಿ ಅಲ್ಲ, ಬೇಕಿದ್ದರೆ 25 ಕೋಟಿ ಮಾನನಷ್ಟ ಮೊಕದ್ದಮೆ ಹಾಕಲಿ. ಅದಕ್ಕೆ ನಾನು ಜಗ್ಗುವುದಿಲ್ಲ, ಬಗ್ಗುವುದಿಲ್ಲ” ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಬಹಿರಂಗ ಸವಾಲ್ ಹಾಕಿದ್ದಾರೆ.

ಮಾನನಷ್ಟ ಮೊಕದ್ದಮೆ ನೋಟಿಸ್ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಾಜಿ ಶಾಸಕ ಹಾಲಪ್ಪ ಅವರ ಆಡಳಿತಾವಧಿಯಲ್ಲಿ ಸಿಗಂದೂರು ದೇವಸ್ಥಾನದ ಆಡಳಿತ ಮಂಡಳಿ ಮತ್ತು ರಾಮಪ್ಪನವರ ನಡುವೆ ವೈಮನಸ್ಸು ಇತ್ತು. ಈ ಹಿನ್ನೆಲೆಯಲ್ಲಿ ಆಗಿನ ಬಿಜೆಪಿ ಸರ್ಕಾರ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಒಳಪಡಿಸಲು ಮುಂದಾಗಿತ್ತು ಎಂದು ಹೇಳಿದರು.

“ಆ ಸಂದರ್ಭದಲ್ಲಿ ಹಾಲಪ್ಪ ಯಾವುದೇ ವಿರೋಧ ವ್ಯಕ್ತಪಡಿಸಲಿಲ್ಲ. ಮೌನವೇ ಸಮ್ಮತಿ ಎಂಬಂತೆ ಅವರು ನಡೆದುಕೊಂಡರು. ಈ ಕಾರಣದಿಂದಲೇ ನಾನು ಈ ವಿಷಯವನ್ನು ಬಹಿರಂಗವಾಗಿ ಪ್ರಶ್ನಿಸಿದ್ದೇನೆ” ಎಂದು ಗೋಪಾಲಕೃಷ್ಣ ಬೇಳೂರು ಸ್ಪಷ್ಟಪಡಿಸಿದರು.

ಸಿಗಂದೂರು ದೇವಸ್ಥಾನದ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ ಅವರು, “ನಮ್ಮ ಕುಟುಂಬ ತಲೆತಲಾಂತರಗಳಿಂದ ಸಿಗಂದೂರು ದೇವಿಯ ಸನ್ನಿಧಿಗೆ ನಡೆದುಕೊಂಡು ಬಂದಿದೆ. ನಾನು ಸಿಗಂದೂರು ದೇವಿಯ ಭಕ್ತ. ನಾನು ಯಾವುದೇ ಆಡಳಿತ ಮಂಡಳಿ ಅಥವಾ ಭಟ್ಟರ ಪರವಲ್ಲ. ನಾನು ಸಿಗಂದೂರು ದೇವಸ್ಥಾನದ ಪರವಾಗಿ ಮಾತ್ರ ನಿಂತಿದ್ದೇನೆ” ಎಂದು ಹೇಳಿದರು.

ಯಾವುದೇ ದೃಢವಾದ ಸಾಕ್ಷ್ಯಾಧಾರಗಳಿಲ್ಲದೆ 5 ಕೋಟಿ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಬಹಿರಂಗವಾಗಿ ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, “5 ಕೋಟಿ ಅಲ್ಲ, 25 ಕೋಟಿ ಮೊಕದ್ದಮೆ ಹಾಕಲಿ. ನಾನು ಹೆದರೋದಿಲ್ಲ. ನ್ಯಾಯಾಲಯದಲ್ಲಿ ಎದುರಿಸಲು ಸಿದ್ಧನಿದ್ದೇನೆ” ಎಂದು ಹೇಳಿದರು.

ವರದಿ : ಮೇಘನ ಗಣೇಶ್

Leave a Reply

Your email address will not be published. Required fields are marked *