ಪ್ರಜಾಪ್ರಭುತ್ವದ ಬಲವರ್ಧನೆಗೆ ವಕೀಲರು ಶ್ರಮಿಸಬೇಕು: ಡಾ.ಹೆಚ್.ಸಿ.ಮಹದೇವಪ್ಪ

ಪ್ರಜಾಪ್ರಭುತ್ವದ ಬಲವರ್ಧನೆಗೆ ವಕೀಲರು ಶ್ರಮಿಸಬೇಕು: ಡಾ.ಹೆಚ್.ಸಿ.ಮಹದೇವಪ್ಪ

ರಾಷ್ಟ್ರೀಯ ವಿಚಾರಗಳನ್ನು ಗಮನದಲ್ಲಿರಿಸಿ ಕರ್ತವ್ಯ ನಿರ್ವವಹಿಸುವ ಮೂಲಕ ಸ್ವಾತಂತ್ರ್ಯದ ಉದ್ದೇಶ, ಸಂವಿಧಾನದ ಆಶಯ ಹಾಗೂ ಪ್ರಜಾಪ್ರಭುತ್ವದ ಬಲವರ್ಧನೆಗೆ ವಕೀಲರು ಶ್ರಮಿಸಬೇಕಿದೆ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ತಿಳಿಸಿದರು.

ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಹಾಗೂ ಮೈಸೂರು ವಕೀಲರ ಸಂಘದ ಸಹಯೋಗದೊಂದಿಗೆ ನಗರದ ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ವಕೀಲರ 10ನೇ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಿ ಸಚಿವರು ಮಾತನಾಡಿದರು.

ಈ ದೇಶದಲ್ಲಿ ಕೋಮು ಸೌಹಾರ್ದತೆ ಕಾಪಾಡುವುದು‌, ಅಸ್ಪೃಶ್ಯತೆ ನಿವಾರಣೆ ಮಾಡುವುದು, ಬಹುತ್ವದ ಭಾರತವನ್ನು ಸಮೃದ್ಧ ನಾಡನ್ನಾಗಿ ಕಟ್ಟುವುದು ಸ್ವಾತಂತ್ರ್ಯದ ಮೂಲ ಉದ್ದೇಶ. ಇದಕ್ಕೆ ಪೂರಕವಾಗಿ ಸಂವಿಧಾನದ ಪೀಠಿಕೆ ಜನರಿಗೆ ನ್ಯಾಯ, ಸಮಾನತೆ ದೊರಕಿಸಿಕೊಡುವ ಮೂಲಕ ಜನರು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸದೃಢರನ್ನಾಗಿಸುತ್ತದೆ ಎಂದು ಹೇಳಿದರು.

ಪ್ರಜಾಪ್ರಭುತ್ವದ ಆಧಾರ ಸ್ಥಂಭವಾದ ನ್ಯಾಯಾಂಗ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಸಂವಿಧಾನದ ಆಶಯವನ್ನು ಈಡೇರಿಸುವ ಮುಖಾಂತರ ಭಾರತವು ಸ್ವಾತಂತ್ರ್ಯದ ಹೋರಾಟ ಮತ್ತು ಸಂವಿಧಾನದ ಪರಿಕಲ್ಪನೆಯಿಂದ ಕೂಡಿದ ರಾಮರಾಜ್ಯವಾಗಬೇಕು. ಈ ಪರಿಕಲ್ಪನೆಯ ಉದ್ದೇಶಗಳನ್ನು ಜಾರಿಗೊಳಿಸಲು ವಕೀಲರ ಪಾತ್ರ ಅತ್ಯಂತ ಪ್ರಮುಖವಾದದ್ದು ಎಂದರು‌.

ಭಾರತವು ಮಹಾನ್ ದೇಶ. ನಾವೆಲ್ಲರೂ ಭಾರತೀಯರು ಎಂದೇಳಲು ಹೆಮ್ಮೆ ಅನಿಸುತ್ತದೆ. ಕಾರಣ ಈ ದೇಶದಲ್ಲಿ ಬುದ್ಧ ಜನಿಸಿದ್ದಾನೆ. ಇದು ಬುದ್ದನ ನಾಡು. ಬುದ್ಧನ ಪಂಚಶೀಲ ತತ್ವಗಳು ಎಲ್ಲರೂ ಅನುಸರಿಸುವಂಥದ್ದು. ಅದರೊಟ್ಟಿಗೆ ಸಿಂಧೂ ನದಿಯ ಚಾರಿತ್ರ್ಯಿಕ ವಿವರಣೆ, ನಾಗರಿಕತೆ, ಬದುಕು ಎಲ್ಲರೂ ತಿಳಿಯಬೇಕು ಎಂದು ಹೇಳಿದರು.

ದೇಶದಲ್ಲಿ ಎಲ್ಲಾ ಧರ್ಮದ ಜನರಿದ್ದಾರೆ. ಹಾಗಾಗಿ ಇದು ಬಹುತ್ವದ ಭಾರತವಾಗಿದೆ. ಅವರವರ ಕೆಲಸವನ್ನು ಸ್ವತಂತ್ರವಾಗಿ ನಿರ್ವಹಣೆ ಮಾಡಲು ವೈಜ್ಞಾನಿಕವಾದ ಮುಕ್ತ ಅವಕಾಶವಿದೆ. ಆದರೆ ರಾಜಕೀಯ ಪಕ್ಷಗಳು ಇಲ್ಲದ ಅಧಿಕಾರ ಬಳಸಿ ಒಂದು ಧರ್ಮದ ಆಚಾರ ವಿಚಾರಗಳನ್ನು ಇನ್ನೊಂದು ಧರ್ಮದ ಮೇಲೆ ಹೇರುವುದು ಬಲವಂತದ ಮತಾಂತರಕ್ಕೆ ಸಮ ಎಂದು ಗಾಂಧೀಜಿ ಹೇಳಿದ್ದಾರೆ. ರಾಜಕೀಯ ಪಕ್ಷಗಳು ಧರ್ಮದ ಹೆಸರಿನಲ್ಲಿ ಯಾಕೆ ರಾಜಕಾರಣ ಮಾಡುತ್ತಿವೆ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದರು.

ಈ ರೀತಿಯ ವೈರುಧ್ಯದ ರಾಜಕೀಯ ನಡವಳಿಕೆ ನಮ್ಮ ಸ್ವಾತಂತ್ರ್ಯ, ಸಂವಿಧಾನದ ಆಶಯ ಈಡೇರಿಸಲು ತೊಡಕಾಗಿವೆ. ಮಾನವ ಹಕ್ಕುಗಳ ಆಯೋಗದ ವರದಿಯಲ್ಲಿ ಮಹಿಳೆಯರ ಮೇಲಿನ ದೌರ್ಬನ್ಯ, ದಲಿತರ ಮೇಲಿನ ಶೋಷಣೆ ಅವಲೋಕಿಸಿದಾಗ ನಾವು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಜೀವಂತವಾದ ಅಸ್ಪೃಶ್ಯತೆ ಹಾಗೂ ಅನ್ನಾಂಗಗಳ ಕೊರತೆಯ ನರಳುವಿಕೆ ಅವಮಾನಕರ ಸಂಗತಿ. ಇದರ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡದಿದ್ದರೆ ಅಪರಾಧಿಗಳ ಸಂಖ್ಯೆ ಹೆಚ್ಚಾಗಿ ನಮ್ಮ ಸಂವಿಧಾನ ಅಪಾಯದಲ್ಲಿ ಸಿಲುಕಬಹುದು. ದೇಶದ ಬೆನ್ನೆಲುಬಾದ ಕೃಷಿ ವ್ಯಾಪಾರೀಕರಣ ಆಗುತ್ತದೆ. ಕೈಗಾರಿಕೆಯು ಕೃಷಿಯನ್ನು ಹಿಂದಿಕ್ಕಿದರೆ, ಗ್ರಾಮೀಣ ಪ್ರದೇಶದ ಆರ್ಥಿಕ ಬೆನ್ನೆಲುಬು ಮುರಿಯಲಿದೆ. ಇಂತಹ ಅನೇಕ ರಾಷ್ಟ್ರೀಯ ಸಮಸ್ಯೆಗಳನ್ನು ವಕೀಲರು ಕೈಗೆತ್ತಿಕೊಳ್ಳಬೇಕು ಎಂದು ಕರೆ ನೀಡಿದರು.

ದೇಶದ ಅಲ್ಪಸಂಖ್ಯಾತರು ಭಯದಿಂದ ಜೀವಿಸುತ್ತಿದ್ದಾರೆ. ಅವರು ಯಾವುದೇ ಕಾರಣಕ್ಕೂ ಭಯಪಡುವ ಅವಶ್ಯಕತೆ ಇಲ್ಲ. ಅವರಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಿಂದ ಸಂಪೂರ್ಣ ರಕ್ಷಣೆಯಿದೆ. ಸಂವಿಧಾನವು ದೇಶದ ಪ್ರತಿಯೊಬ್ಬ ಪ್ರಜೆಯನ್ನೂ ರಕ್ಷಿಸುತ್ತದೆ ಎಂದು ಹೇಳಿದರು.

ವಕೀಲರ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರ್ಕಾರ ಪ್ರಮಾಣಿಕ ಪ್ರಯತ್ನ ಮಾಡಲಿದೆ. ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಮೈಸೂರು ಅಭಿವೃದ್ಧಿಗೆ, ಸಾಮಾಜಿಕ ನ್ಯಾಯಕ್ಕೆ, ಮೀಸಲಾತಿಗೆ, ಉತ್ತಮ ಆಡಳಿತಕ್ಕೆ ಹೆಸರುವಾಸಿಯಾದ ಸಾಮರಸ್ಯದಿಂದ ಕೂಡಿದ ನಗರ. ಇಂತಹ ಸ್ಥಳದಲ್ಲಿ ದೊಡ್ಡ ನ್ಯಾಯಪಂಡಿತರು ಸೇರಿ ಸಮ್ಮೇಳನ ನಡೆಸಿದ್ದು ಸಂತೋಷದ ವಿಚಾರ ಎಂದು ತಿಳಿಸಿದರು.

ವರದಿ:ನಂದಿನಿ ಮೈಸೂರು

ಶಿವಾ ಮೋಟರ್ಸ್
ಮುಖ್ಯ ಕಛೇರಿ :ನo 356/10/ಸಿ, ವೈಕುಂಠಧಾಮ ಪಕ್ಕದಲ್ಲಿ, ಹಳೆ ಪಿ. ಬಿ. ರಸ್ತೆ, ದಾವಣಗೆರೆ -577006. ಶಾಖೆ : ವೀರ
 ರಾಣಿ ಕೆಳದಿ ಚೆನ್ನಮ್ಮ ರಸ್ತೆ, ಶುಭ ಮಂಗಳ ಕಲ್ಯಾಣ ಮಂಟಪ ಹತ್ತಿರ, ವಿನೋಭಾ ನಗರ, ಶಿವಮೊಗ್ಗ -577304. Mob: + 91 7259433400 .8182350116

Leave a Reply

Your email address will not be published. Required fields are marked *