ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಮೂಲಸೌಕರ್ಯ ಅಭಿವೃದ್ಧಿಗೆ ಮುಖ್ಯಮಂತ್ರಿಗಳಿಗೆ ಮನವಿ

ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಮೂಲಸೌಕರ್ಯ ಅಭಿವೃದ್ಧಿಗೆ ಮುಖ್ಯಮಂತ್ರಿಗಳಿಗೆ ಮನವಿ

ಬೆಂಗಳೂರು: ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ (KBA) ತನ್ನ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸೌಲಭ್ಯಗಳ ಅಗತ್ಯತೆಯ ಕುರಿತು ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತು.

ಕರ್ನಾಟಕದಲ್ಲಿ ಕ್ರೀಡಾ ಕ್ಷೇತ್ರಕ್ಕೆ, ವಿಶೇಷವಾಗಿ ಬ್ಯಾಡ್ಮಿಂಟನ್ ಕ್ರೀಡೆಯ ಅಭಿವೃದ್ಧಿಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ರಾಜ್ಯ ಸರ್ಕಾರ ನೀಡುತ್ತಿರುವ ಬೆಂಬಲ ಶ್ಲಾಘನೀಯವಾಗಿದೆ ಎಂದು ಅಸೋಸಿಯೇಷನ್ ಪ್ರತಿನಿಧಿಗಳು ತಿಳಿಸಿದರು. ಕಳೆದ ಏಳು ದಶಕಗಳಿಂದ Karnataka Badminton Association ಸಾವಿರಾರು ಪ್ರತಿಭಾವಂತ ಆಟಗಾರರನ್ನು ರೂಪಿಸಿ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಗೌರವವನ್ನು ಹೆಚ್ಚಿಸಿದೆ.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪ್ರಕಾಶ್ ಪಡುಕೋಣೆ, ವಿಶ್ವಮಟ್ಟದ ಆಟಗಾರ ಲಕ್ಷ್ಯ ಸೇನ್ ಸೇರಿದಂತೆ ಅನೇಕ ಶ್ರೇಷ್ಠ ಬ್ಯಾಡ್ಮಿಂಟನ್ ತಾರೆಗಳು ಈ ಸಂಸ್ಥೆಯಿಂದ ಹೊರಬಂದಿರುವುದು ಇದರ ಸಾಧನೆಯ ಸಾಕ್ಷಿಯಾಗಿದೆ.

ಇಂದಿನ ಸ್ಪರ್ಧಾತ್ಮಕ ಕ್ರೀಡಾ ಯುಗದಲ್ಲಿ ಯುವ ಆಟಗಾರರು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಅತ್ಯಾಧುನಿಕ ಕ್ರೀಡಾಂಗಣಗಳು, ವೈಜ್ಞಾನಿಕ ತರಬೇತಿ ವ್ಯವಸ್ಥೆ, ವಸತಿ ಸೌಲಭ್ಯಗಳು ಹಾಗೂ ಸಮಗ್ರ ಬೆಂಬಲ ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ KBA ತನ್ನ ಮೂಲಸೌಕರ್ಯ ವಿಸ್ತರಣೆ, ಅಂತರರಾಷ್ಟ್ರೀಯ ಮಟ್ಟದ ತರಬೇತಿ ಕೇಂದ್ರಗಳ ಸ್ಥಾಪನೆ ಹಾಗೂ ಜಿಲ್ಲೆ ಮತ್ತು ಗ್ರಾಮೀಣ ಪ್ರದೇಶಗಳ ಪ್ರತಿಭೆಗಳನ್ನು ಗುರುತಿಸಿ ಬೆಳೆಸಲು ಸರ್ಕಾರದ ಸಹಕಾರವನ್ನು ಮನವಿ ಮಾಡಿದೆ.

ರಾಜ್ಯದ ಪ್ರತಿಯೊಂದು ಮೂಲೆಯಿಂದ ಪ್ರತಿಭೆಗಳು ಹೊರಹೊಮ್ಮಿ, ಕರ್ನಾಟಕವು ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ದೇಶದಲ್ಲಿಯೇ ಮುಂಚೂಣಿಯ ಸ್ಥಾನ ಪಡೆಯಬೇಕು ಎಂಬುದು ನಮ್ಮ ಸಂಕಲ್ಪ ಎಂದು ಅಸೋಸಿಯೇಷನ್ ತಿಳಿಸಿದೆ.
🏸 ಕ್ರೀಡೆಗೆ ಬೆಂಬಲ – ಯುವಶಕ್ತಿಗೆ ಬಲ – ಕರ್ನಾಟಕದ ಭವಿಷ್ಯಕ್ಕೆ ಹೂಡಿಕೆ 🏸

ವರದಿ : ಮೇಘನ ಗಣೇಶ್

Leave a Reply

Your email address will not be published. Required fields are marked *