ಬಿ.ಹೆಚ್. ರಸ್ತೆ ಡಿವೈಡರ್ ಸಮಸ್ಯೆ; ತಕ್ಷಣ ಕ್ರಮಕ್ಕೆ ಜಮೀಲ್ ಸಾಗರ್ ಮನವಿ

ಬಿ.ಹೆಚ್. ರಸ್ತೆ ಡಿವೈಡರ್ ಸಮಸ್ಯೆ; ತಕ್ಷಣ ಕ್ರಮಕ್ಕೆ ಜಮೀಲ್ ಸಾಗರ್ ಮನವಿ

ಹಿಂದ್ ಸಮಾಚಾರ ನ್ಯೂಸ್ | ಮಾರ್ಚ್ 2026:
ಸಾಗರ: ನಗರದ ಪ್ರಮುಖ ಬಿ.ಹೆಚ್. ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಡಿವೈಡರ್‌ಗಳಿಂದ ಸಾರ್ವಜನಿಕರು ಮತ್ತು ವಾಹನ ಸವಾರರು ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ, ಸಾಮಾಜಿಕ ಕಾರ್ಯಕರ್ತ ಹಾಗೂ ಯುವ ಮುಖಂಡ ಜಮೀಲ್ ಸಾಗರ್ ಅವರು ಪೊಲೀಸ್ ಉಪಾಧೀಕ್ಷಕರಿಗೆ ಮನವಿ ಸಲ್ಲಿಸಿದ್ದಾರೆ.

ನಗರದ ಸಂಚಾರ ಸುಗಮತೆಗೆ ಅಡಚಣೆ ಉಂಟಾಗುತ್ತಿರುವುದನ್ನು ಉಲ್ಲೇಖಿಸಿದ ಅವರು, ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಡಿವೈಡರ್ ತೆರವುಗೊಳಿಸುವುದು ಹಾಗೂ ಕಾಮಗಾರಿಯನ್ನು ಸರಿಪಡಿಸುವುದು ಅತ್ಯಾವಶ್ಯಕ ಎಂದು ತಿಳಿಸಿದ್ದಾರೆ.

ಮನವಿಯಲ್ಲಿ ಅವರು ಮುಂದಿಟ್ಟಿರುವ ಪ್ರಮುಖ ಬೇಡಿಕೆಗಳು ಹೀಗಿವೆ:
ಶರಾವತಿ ಮೆಡಿಕಲ್ ಮುಂಭಾಗ: ಎರಡೂ ಬದಿಗಳಲ್ಲಿ ಕ್ರಾಸ್ ರಸ್ತೆಗಳಿರುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದ ಇಲ್ಲಿ ಡಿವೈಡರ್ ತೆರವುಗೊಳಿಸುವಂತೆ ಆಗ್ರಹಿಸಲಾಗಿದೆ.

ಟಿ.ವಿ.ಎಸ್. ಶೋರೂಂ ಎದುರು: ಟಿ.ವಿ.ಎಸ್. ಶೋರೂಂನಿಂದ ನೆಹರೂ ಮೈದಾನಕ್ಕೆ ಹೋಗುವ ಮಾರ್ಗದ ಎದುರಿನ ಡಿವೈಡರ್ ಸಾರ್ವಜನಿಕ ಹಿತದೃಷ್ಟಿಯಿಂದ ತೆರವುಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

ಯುನೈಟೆಡ್ ಪೆಟ್ರೋಲ್ ಬಂಕ್ ಹತ್ತಿರ: ಪೆಟ್ರೋಲ್ ಬಂಕ್ ಎದುರು ಅರ್ಧಕ್ಕೆ ನಿಂತಿರುವ ಡಿವೈಡರ್ ಕಾಮಗಾರಿಯನ್ನು ಶಿವಪ್ಪನಾಯಕ ಸರ್ಕಲ್ ವರೆಗೆ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ.

ಸಾರ್ವಜನಿಕರ ಸಂಚಾರಕ್ಕೆ ಯಾವುದೇ ಅಡಚಣೆ ಉಂಟಾಗದಂತೆ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಮೀಲ್ ಸಾಗರ್ ಅವರು ಮನವಿ ಮಾಡಿದ್ದಾರೆ.

ವರದಿ : ಅಭಿಲಾಷ್ ಸಿ ಜಿ

Leave a Reply

Your email address will not be published. Required fields are marked *