ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಸೂಚನೆ ಮೇರೆಗೆ ಹಳೆ ಜಿಲ್ಲಾಸ್ಪತ್ರೆಯಲ್ಲಿಯೇ ಆರಂಭಗೊಂಡ ಹೊರ ರೋಗಿಗಳ ವಿಭಾಗಸೇವೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಭೇಟಿ ಪರಿಶೀಲನೆ

ಚಾಮರಾಜನಗರ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜಿಲ್ಲಾಸ್ಪತ್ರೆಯ ಕಟ್ಟಡದಲ್ಲಿ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧನಾ ಆಸ್ಪತ್ರೆಯ ಎಲ್ಲಾ ಹೊರರೋಗಿ ವಿಭಾಗಗಳನ್ನು ಇಂದಿನಿಂದ ಆರಂಭ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಭೇಟಿ ನೀಡಿಸ್ಥಳ ಪರಿಶೀಲನೆ ನಡೆಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಆಸ್ಪತ್ರೆ ಆರಂಭಕ್ಕೆ ಕಾಳಜಿವಹಿಸಿ ನೀಡಿದ ಸೂಚನೆ ಮೇರೆಗೆ ಇಂದಿನಿಂದ ನಗರದ ಹಳೆಯ ಕಟ್ಟಡ ಆಸ್ಪತ್ರೆಯಲ್ಲಿ ಹೊರರೋಗಿಗಳ ವಿಭಾಗ ಪುನರಾರಂಭಗೊಂಡಿವೆ.
ಕಳೆದ ಅಕ್ಟೋಬರ್ ನಲ್ಲಿ ಎಡಬೆಟ್ಟದಲ್ಲಿ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧನಾ ಆಸ್ಪತ್ರೆ ಉದ್ಘಾಟನೆಯಾದ ಬಳಿಕ ಹೆರಿಗೆ ಮತ್ತು ಮಕ್ಕಳ ವಿಭಾಗ ಬಿಟ್ಟು ಉಳಿದೆಲ್ಲ ವಿಭಾಗಗಳ ನೂತನ ಬೋಧನಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ನಗರದಿಂದ ದೂರವಿರುವ ಈ ಆಸ್ಪತ್ರೆಗೆ ಹೋಗಿ ಬರಲು ತೊಂದರೆಯಾಗುತ್ತಿದೆ ಮೊದಲಿನಂತೆ ಹಳೆಯ ಜಿಲ್ಲಾಸ್ಪತ್ರೆಯಲ್ಲಿಯೇ ವೈದ್ಯಕೀಯ ಸೇವೆಗಳು ಸಿಗಬೇಕು ಎಂದು ವಿವಿಧ ಕನ್ನಡ ಪರ ಸಂಘಟನೆಗಳು ಸಾರ್ವಜನಿಕರು ಒತ್ತಾಯಿಸಿದ್ದರು. ಮಾಧ್ಯಮಗಳು ಕೂಡ ಈ ಬಗ್ಗೆ ಗಮನ ಸೆಳೆದಿದ್ದವು.
ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಇತ್ತೀಚೆಗೆ ಮಳೆ ಪ್ರವಾಹ ಹಾನಿ ಕುರಿತು ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಮತ್ತೆ ಚಿಕಿತ್ಸೆ ಆರಂಭಿಸಲು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಮತ್ತು ಆರೋಗ್ಯಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದ ಹಾಗೂ ಡೀನ್ ಮತ್ತು ನಿರ್ದೇಶಕರ ಮೌಖಿಕ ಆದೇಶದಂತೆ ಎಲ್ಲಾ ವಿಭಾಗದ ಹೊರರೋಗಿ ವಿಭಾಗಗಳನ್ನು ಹಳೆಯ ಜಿಲ್ಲಾಸ್ಪತ್ರೆಯ ಕಟ್ಟಡದಲ್ಲಿಯೇ ಇಂದಿನಿಂದ ಆರಂಭಿಸಲಾಗಿದೆ.
ಇನ್ನು ಮುಂದಿನ ದಿನಗಳಲ್ಲಿ ತುರ್ತು ಚಿಕಿತ್ಸಾ ಘಟಕವನ್ನು ಆರಂಭಿಸಲಾಗುತ್ತದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ॥ ಕೃಷ್ಣಪ್ರಸಾದ್ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ರವರು ಇಂದು ಹಳೆಯ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಆರಂಭವಾಗಿರುವ ಹೊರರೋಗಿ ವಿಭಾಗಗಳನ್ನು ಪರಿಶೀಲಿಸಿದರು ಪ್ರತಿ ವಿಭಾಗಕ್ಕೂ ಭೇಟಿ ನೀಡಿದ ಜಿಲ್ಲಾಧಿಕಾರಿಯವರು ಅಗತ್ಯವಿರುವ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸುವಂತೆ ನಿರ್ದೇಶನ ನೀಡಿದರು.
ಹಿಂದೆ ಇಲ್ಲಿಯ ಒಳರೋಗಿಗಳ ಚಿಕಿತ್ಸೆ ತೀವ್ರ ನಿಗಾ ಘಟಕ ಸೇರಿದಂತೆ ಇನ್ನಿತರೆ ಎಲ್ಲಾ ವೈದ್ಯಕೀಯ ಸೇವೆಗಳನ್ನು ಆರಂಭಿಸಲು ಬೇಕಿರುವ ಅಗತ್ಯ ಮೂಲ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಕುರಿತು ಹಿರಿಯ ವೈದ್ಯಾಧಿಕಾರಿಗಳೊಂದಿಗೆ ಸಮಾಲೋಚಿಸಿದರು.
ಪ್ರಯೋಗಾಲಯ, ಆಂಬುಲೆನ್ಸ್, ಔಷಧಿಗಳ ದಾಸ್ತಾನು, ಸೇರಿದಂತೆ ಪ್ರತಿಯೊಂದು ಸೌಕರ್ಯಗಳ ಕುರಿತು ವಿವರವಾಗಿ ಚರ್ಚಿಸಿದರು.
ಇದೇ ವೇಳೆ ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ವಹಣೆಯ ಕೇಂದ್ರ ಹಾಗೂ ಶಿಶು ಪಾಲನಾ ಕೇಂದ್ರಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿ ಅವರು ವೀಕ್ಷಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ॥ ಕೃಷ್ಣ ಪ್ರಸಾದ್, ಜಿಲ್ಲಾ ನೋಡಲ್ ವೈದ್ಯಾಧಿಕಾರಿ ಡಾಕ್ಟರ್ ಮಹೇಶ್ ,ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾಕ್ಟರ್ ಸುಗುಣ, ಡಾಕ್ಟರ್ ಮಾರುತಿ,ಡಾಕ್ಟರ್ ಪ್ರದೀಪ್ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಗೀತಾ ಲಕ್ಷ್ಮಿ ಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.


