ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ವತಿಯಿಂದ ಮೈಸೂರು ಮಹಿಳಾ ಜಾಗರಣ ಸಮಾವೇಶ
ಮೈಸೂರು | ಮಾರ್ಚ್ 7, 2026:
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ವತಿಯಿಂದ ಮಹಿಳಾ ಜಾಗರಣ ಸಮಾವೇಶವನ್ನು ಮಾರ್ಚ್ 7ರಂದು ಸಂಜೆ 4 ಗಂಟೆಗೆ ಮೈಸೂರಿನ ಚಾಮುಂಡಿಪುರಂನಲ್ಲಿರುವ “ಅನಂತ ವನಶ್ರೀ” ವನವಾಸಿ ಕಲ್ಯಾಣ ಪ್ರಾಂತ ಕಾರ್ಯಾಲಯದಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮವು ದೀಪ ಪ್ರಜ್ವಲನೆಯೊಂದಿಗೆ ಆರಂಭವಾಯಿತು. ಗ್ರಾಹಕ ಪಂಚಾಯತ್ ಮೈಸೂರು ಜಿಲ್ಲಾ ಕಾರ್ಯದರ್ಶಿ ಶ್ರೀಕಂಠೇಶ ಅವರು ಗ್ರಾಹಕ ಗೀತೆಯನ್ನು ಹಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ. ಬಾಲು ಕೆಂಚಪ್ಪ ಜಿ ಅವರು ಮಾತನಾಡುತ್ತಾ, ಆರ್ಥಿಕ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. ಮಹಿಳೆಯರಲ್ಲಿ ಆರ್ಥಿಕ ಸಾಕ್ಷರತೆಯ ಅಗತ್ಯತೆ, ಆರ್ಥಿಕ ವ್ಯವಹಾರಗಳಲ್ಲಿ ಮಹಿಳೆಯರು ತೋರಿಸುವ ಜಾಗರೂಕತೆ ಮತ್ತು ದೂರದೃಷ್ಟಿ ಶ್ಲಾಘನೀಯವಾಗಿದ್ದು, ದೇಶದ ಆರ್ಥಿಕ ಪ್ರಗತಿಯಲ್ಲಿ ಮಹಿಳೆಯರ ಕೊಡುಗೆ ಅಪಾರವಾಗಿದೆ ಎಂದು ಅವರು ಹೇಳಿದರು.

ಕರ್ನಾಟಕ ಪ್ರಾಂತ ಮಹಿಳಾ ಪ್ರಮುಖರಾದ ಡಾ. ಚಂದ್ರಿಕಾ ಕುರಂದ್ವಾಡ್ ಅವರು ಮಾತನಾಡುತ್ತಾ, ಮಾಧ್ಯಮಗಳಲ್ಲಿ ಹರಡುತ್ತಿರುವ ಜಾಹೀರಾತುಗಳ ಅಬ್ಬರ ನಮ್ಮ ಜೀವನಶೈಲಿಯ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ ಎಂದು ಹೇಳಿದರು. ಕರೋನಾದ ನಂತರ ಅಂತರ್ಜಾಲ ಮತ್ತು ಮೊಬೈಲ್ ಮೂಲಕ ಬರುವ ಜಾಹೀರಾತುಗಳು ಮಕ್ಕಳ ಮತ್ತು ಮಹಿಳೆಯರ ಮೇಲೆ ಹೆಚ್ಚು ಪ್ರಭಾವ ಬೀರುತ್ತಿದ್ದು, ಕುಟುಂಬದಲ್ಲಿ ಈ ವಿಷಯಗಳನ್ನು ಚರ್ಚಿಸುವುದು ಅಗತ್ಯವಾಗಿದೆ ಎಂದು ಹೇಳಿದರು. ದಾರಿತಪ್ಪಿಸುವ ಜಾಹೀರಾತುಗಳು ಮತ್ತು ಅನ್ಯಾಯದ ವ್ಯಾಪಾರ ಪದ್ಧತಿಗಳ ವಿರುದ್ಧ ಗ್ರಾಹಕ ಸಂರಕ್ಷಣಾ ಕಾಯ್ದೆಯ ಬಗ್ಗೆ ಅರಿವು ಮೂಡಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಡಾ. ಜ್ಯೋತಿಶಂಕರ್ ಅವರು ಮಾತನಾಡುತ್ತಾ, ಜಾಹೀರಾತುಗಳ ಪ್ರಭಾವದಿಂದ ನಮ್ಮ ಜೀವನ ಮೌಲ್ಯಗಳು ಕುಂದುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು. ಶಿಕ್ಷಣ ಕ್ಷೇತ್ರದಲ್ಲಿಯೂ ಜಾಹೀರಾತುಗಳ ಮೂಲಕ ವ್ಯಾಪಾರ ನಡೆಯುತ್ತಿರುವುದು ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡುವುದರಲ್ಲಿ ವಿಫಲವಾಗುತ್ತಿದೆ ಎಂದು ಅವರು ಹೇಳಿದರು. ಜಾಹೀರಾತುಗಳಲ್ಲಿ ಮಹಿಳೆಯರನ್ನು ಬಿಂಬಿಸುವ ವಿಧಾನವು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಗ್ರಾಹಕರು ಇದಕ್ಕೆ ಎಚ್ಚರಿಕೆಯಿಂದ ಗಮನಹರಿಸಬೇಕಾಗಿದೆ ಎಂದು ಹೇಳಿದರು.

ಚರ್ಚಾ ಗೋಷ್ಠಿಯಲ್ಲಿ ಭಾಗವಹಿಸಿದ ಮಹಿಳೆಯರು ವಿವಿಧ ಪ್ರಶ್ನೆಗಳನ್ನು ಕೇಳಿ ತಜ್ಞರಿಂದ ಉತ್ತರಗಳನ್ನು ಪಡೆದರು. ಜಾಹೀರಾತುಗಳಲ್ಲಿ ಮಹಿಳೆಯರನ್ನು ಅಶ್ಲೀಲವಾಗಿ ತೋರಿಸುವುದು ಹಾಗೂ ಗ್ರಾಹಕರಿಗೆ ನೀಡುವ ವಸ್ತುಗಳ ಮತ್ತು ಸೇವೆಗಳ ಗುಣಮಟ್ಟದ ಬಗ್ಗೆ ಕಂಪನಿಗಳು ಸರಿಯಾಗಿ ನಡೆದುಕೊಳ್ಳದಿದ್ದರೆ ಕ್ರಮ ಕೈಗೊಳ್ಳಬೇಕೆಂದು ಮಹಿಳೆಯರು ಮನವಿ ಮಾಡಿದರು.
ಮೈಸೂರು ಜಿಲ್ಲಾ ಉಪಾಧ್ಯಕ್ಷ ವಿಕ್ರಂ ಅಯ್ಯಂಗಾರ್ ಅವರು ವಂದನಾರ್ಪಣೆ ಸಲ್ಲಿಸಿದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮವು ಸಮಾಪ್ತಿಯಾಯಿತು.
ಹಿಂದ್ ಸಮಾಚಾರ ನ್ಯೂಸ್ ಡೆಸ್ಕ್
ವರದಿ : ಮೇಘನ ಗಣೇಶ್

