ಸಂವಿಧಾನ ಬದಲು ಮಾಡುವವರಿಗೆ ತಕ್ಕಪಾಠ ಕಲಿಸಿ: ಡಾ.ಹೆಚ್.ಸಿ.ಮಹದೇವಪ್ಪ

ಸಂವಿಧಾನ ಬದಲು ಮಾಡುವವರಿಗೆ ತಕ್ಕಪಾಠ ಕಲಿಸಿ: ಡಾ.ಹೆಚ್.ಸಿ.ಮಹದೇವಪ್ಪ

ಪಿರಿಯಾಪಟ್ಟಣ: ಪ್ರತಿಯೊಬ್ಬರೂ ಸಂಘಟಿತಾಕ್ಮಕ ಹೋರಾಟಕ್ಕೆ ಸಿದ್ಧವಾಗಬೇಕಿದೆ. ರಾಜಕೀಯವಾಗಿ ನಿರ್ಣಾಯಕ ಪಾತ್ರವಹಿಸಿ, ಸಂವಿಧಾನ ಬದಲಿಸುವ ಮಾತುಗಳನ್ನಾಡುವವರಿಗೆ ಈ ಭಾರಿ ತಕ್ಕಪಾಠ ಕಲಿಸಬೇಕು ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ತಿಳಿಸಿದರು.ತಾಲ್ಲೂಕಿನ ನವಿಲೂರು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ವತಿಯಿ‌ಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಡಾ.ಬಿ‌.ಆರ್.ಅಂಬೇಡ್ಕರ್ ಹಾಗೂ ಗೌತಮ ಬುದ್ಧರ ಪ್ರತಿಮೆಯನ್ನು ಅನಾವರಣಗೊಳಿಸಿದ ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು.ಇದು ಸಂವಿಧಾನದ ಅಳಿವು, ಉಳಿವಿನ ಸಂದಿಗ್ಧ ಪರಿಸ್ಥಿತಿಯಾಗಿದೆ. ನಾವು ಎಚ್ಚರ ತಪ್ಪಿದರೆ ಸಂವಿಧಾನ ಮತ್ತಷ್ಟು ಅಪಾಯಕ್ಕೆ ಸಿಲುಕಲಿದೆ. ಅಧಿಕಾರವನ್ನು ಯೋಗ್ಯರು, ಸಮರ್ಥರು ಹಾಗೂ ವಿವೇಕರ ಕೈಗೆ ನೀಡಬೇಕು. ಸಂವಿಧಾನಕ್ಕೆ ಪೂರಕವಾಗಿ ಕೆಲಸ ಮಾಡುವವರಿಗೆ ಅವಕಾಶ ಕೊಡಬೇಕು. ಸಂವಿಧಾನಕ್ಕೆ ಅಪಾಯವೊಡ್ಡುವ ಕೋಮುಶಕ್ತಿ ಹಾಗೂ ಜಾತೀವಾದ ಧಿಕ್ಕರಿಸಿ ಪ್ರಜಾಪ್ರಭುತ್ವ ರಕ್ಷಿಸಬೇಕು ಎಂದು ಕರೆ ನೀಡಿದರು‌.ಅಂಬೇಡ್ಕರ್, ಬುದ್ಧ, ಬಸವಣ್ಣರ ಪ್ರತಿಮೆಗಳು ಕೇವಲ ಪೂಜಾ ವಸ್ತುಗಳಲ್ಲ. ತುಳಿತಕ್ಕೊಳಗಾದ ಶೋಷಿತರು ತಮ್ಮ ಹಕ್ಕುಗಳನ್ನು ಪಡೆಯಲು ಅವರು ಪ್ರೇರಣಾ ಶಕ್ತಿಗಳು. ಭಾರತದ ಎಲ್ಲಾ ಜನರ ಹಕ್ಕನ್ನು ರಕ್ಷಣೆ ಮಾಡುವಂಥ ಮಹತ್ವದ ಸಂವಿಧಾನವನ್ನು ಬಾಬಸಾಹೇಬರು ನಮಗೆ ನೀಡಿದ್ದಾರೆ. ಅದರಲ್ಲಿ ಜನರು ಸ್ವತಂತ್ರ್ಯವಾಗಿ ಬದುಕುವ ಹಕ್ಕುನ್ನು ಕಲ್ಪಿಸಲಾಗಿದೆ. ಆದರೆ ಇಂದು ಒಬ್ಬರ ಭಾವನೆಯನ್ನು ಮತ್ತೊಬ್ಬರ ಮೇಲೆ ಹೇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸಂವಿಧಾನದ ಆಶಯವನ್ನು ಪ್ರತಿಯೊಬ್ಬರೂ ಅರಿತು ಜಾಗೃತರಾಗಬೇಕು ಎಂದು ಸಲಹೆ ನೀಡಿದರು.

ಸಂವಿಧಾನ ಜಾರಿಯಾಗಿ 75 ವರ್ಷವಾದರೂ ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆ ಇನ್ನೂ ನೆಲೆಸಿದೆ. ಈ ಹಿನ್ನೆಲೆ ರಾಷ್ಟ್ರದ ಜನರು ಕಣ್ಣು ತೆರೆಸುವಂತಹ ಸಂವಿಧಾನ ಜಾಗೃತಿ ಜಾಥಾ ಎಂಬ ಮಹತ್ವದ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಗಿದೆ. ಪ್ರತಿಯೊಬ್ಬರೂ ಕೂಡ ಸಮಾನತೆ, ಸೋದರತ್ವ ಹಾಗೂ ಉತ್ತಮವಾದ ಬದುಕು ನಡೆಸಬೇಕೆಂಬುದು ಅದರ ಉದ್ದೇಶವಾಗಿದೆ ಎಂದು ಹೇಳಿದರು.

ನಮ್ಮ ಸರ್ಕಾರದ ಪಂಚ ಗ್ಯಾರಂಟಿಗಳು ಮತಕ್ಕಾಗಿ ನೀಡಿದ್ದಲ್ಲ. ಸಂವಿಧಾನದ ಅಶಯಕ್ಕೆ ಅನುಗುಣವಾಗಿ ದೇಶದ ಸಂಪತ್ತನ್ನು ಎಲ್ಲಾ ಜನರಿಗೆ ಸಮಾನವಾಗಿ ಹಂಚುವ ಬಹುದೊಡ್ಡ ಜನಪರ ಕಾರ್ಯಕ್ರಮವಾಗಿದೆ. ಇದರಿಂದ ಬಡವರು, ಮಹಿಳೆಯರು ಸ್ವಾಭಿಮಾನದ ಬದುಕು ನಡೆಸಲು ಸಹಕಾರಿಯಾಗಿದೆ. ಇದು ನಮ್ಮ ಕಾಂಗ್ರೆಸ್ ಸರ್ಕಾರದ ಬದ್ಧತೆಗೆ ಸಾಕ್ಷಿ. ಆದರೆ ಬಡವರು ಬಡವರಾಗಿಯೇ ಇರಬೇಕು ಎಂಬ ಶ್ರೇಣಿಕೃತ ವ್ಯವಸ್ಥೆಯಲ್ಲಿರುವ ಕೆಲವರು ಗ್ಯಾರಂಟಿ ಯೋಜನೆಯನ್ನು ಟೀಕಿಸುತ್ತಿದ್ದಾರೆ. ಅವರಿಗೆ ಯಾವುದೇ ನೈತಿಕತೆ ಇಲ್ಲ ಎಂದರು.

ಗ್ರಾಮದ ಮೂಲಭೂತ ಸೌಕರ್ಯ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಅಗತ್ಯ ಅನುದಾನವನ್ನು ಖಂಡಿತ ನೀಡಲಾಗುವುದು. ಚುನಾವಣೆ ಮುಗಿದ ಬಳಿಕ ಈ ಭಾಗದ ಸಾವಿರಾರು ವಿದ್ಯಾವಂತ ಯುವಕರಿಗೆ ಉದ್ಯೋಗ ದೊರಕಿಸಲು ಅನುಕೂಲವಾಗುವಂತೆ ಪಿರಿಯಾಪಟ್ಟಣದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು.

ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರಾದ ಕೆ.ವೆಂಕಟೇಶ್ ಅವರು ಮಾತನಾಡಿ, ಬಾಬಸಾಹೇಬರು ದೇಶದ ಎಲ್ಲಾ ವರ್ಗದ ಜನರನ್ನು ಗಮನದಲ್ಲಿರಿಸಿ ಶ್ರೇಷ್ಠವಾದ ಸಂವಿಧಾನ ರಚಿಸಿಕೊಟ್ಟಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಸಂವಿಧಾನ ಬದಲಿಸಬೇಕು ಎನ್ನುವ ವ್ಯಕ್ತಿಗಳನ್ನು ನಾವು ದೂರವಿಡಬೇಕಿದೆ. ಸರ್ವಾಧಿಕಾರ ಧೋರಣೆ ಮಿತಿಮೀರುತ್ತಿದೆ. ಇದರ ಬಗ್ಗೆ ನಾವು ಎಚ್ಚರದಿಂದ ಇರಬೇಕು. ನಾವೆಲ್ಲರೂ ಅಣ್ಣತಮ್ಮಂದಿರಂತೆ ಬದುಕು ನಡೆಸಬೇಕು ಎಂದರು.

ನಮ್ಮ ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಗಳು ಎಂದೆಂದೂ ಜನಪರವಾಗಿರುತ್ತದೆ. ಜನರಿಗೆ ಅನುಕೂಲವಾಗುವ ಎಲ್ಲಾ ಯೋಜನೆಯನ್ನು ಜಾರಿ ಮಾಡಲು ನಾವು ಬದ್ಧರಿದ್ದೇವೆ. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಸರ್ವಾಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೋದಿದತ್ತ ಬಂತೇಜಿ, ಕಾಂಗ್ರೆಸ್ ಮುಖಂಡರಾದ ಎಂ.ಲಕ್ಷ್ಮಣ್, ಚಿಂತಕ ಹೊ.ಬ.ರಘೋತ್ತಮ, ನವಿಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸರೋಜ ಪ್ರಕಾಶ್, ಉಪಾಧ್ಯಕ್ಷ ಬಸವರಾಜು, ಸದಸ್ಯರಾದ ಯಶೋಧಮ್ಮ, ಮಂಜುಳಾ, ಶಾಂತಮ್ಮ, ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ಅಧ್ಯಕ್ಷ ಮಹದೇವು, ಗ್ರಾಮದ ಯಜಮಾನರಾದ ಸೋಮೇಗೌಡ, ಸಣ್ಣದೊಡ್ಡಯ್ಯ, ಗ್ರಾಮದ ಯುವಮುಖಂಡ ರಾಮು ಸೇರಿದಂತೆ ಮುಂತಾದವರು ಉಪಸ್ಥಿತಿದ್ದರು

ವರದಿ :ನಂದಿನಿ ಮೈಸೂರು

https://whatsapp.com/channel/0029VaA61PAC6ZvhcEyEjS0S To Join Hind- Samachar What’s up Channel click the above link

ಕೇವಲ ಐದು ತಿಂಗಳ ಕಾಲಾವಧಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಸಾರ್ಹ ಕಂಪನಿ .ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್ – ಟೆಕ್ ಇಂಟರ್ ನ್ಯಾಷನಲ್(cem-tech international construction).ಸಂಪರ್ಕಿಸಿ: 9916432555 ,9986432555

Leave a Reply

Your email address will not be published. Required fields are marked *