ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಇಂದು ಮೈಸೂರಿನಲ್ಲಿ ನೀಡಿದ ಮಾಧ್ಯಮ ಹೇಳಿಕೆ
ಸರ್ಕಾರದಿಂದ ಜನರಿಗೆ ಯಾವುದನ್ನೂ ಉಚಿತವಾಗಿ ನೀಡಬಾರದು ಎಂಬ ಮನೋಪ್ರವೃತ್ತಿಯೇ ಸಂವಿಧಾನದ ಆಶಯಕ್ಕೆ ವಿರುದ್ಧವಾದ್ದು. ತುಳಿತಕ್ಕೊಳಗಾದ ಜನರನ್ನು ಮೇಲೆತ್ತುವುದು ಸಂವಿಧಾನದ ಮೂಲ ಉದ್ದೇಶ. ಸಮಸಮಾಜವನ್ನು ನಿರ್ಮಾಣ ಮಾಡುವುದೇ ಅದರ ಪ್ರಮುಖ ಆದ್ಯತೆ. ಹೀಗಾಗಿ ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಅವರು ಹೇಳಿರುವುದು ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಬಡತನ ನಿರ್ಮೂಲನೆಗೆ ವಿರುದ್ಧವಾದದ್ದು.
ನಮ್ಮ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳಿಂದ ನಾಡಿನ 1.32 ಲಕ್ಷ ಕುಟುಂಬಗಳು ಸ್ವಾವಲಂಬಿ ಜೀವನದ ಕಡೆಗೆ ಹೆಜ್ಜೆ ಹಾಕುತ್ತಿವೆ. ಆದ್ದರಿಂದ ಅವರು ಈ ಮಾತನ್ನು ಪ್ರಧಾನ ಮಂತ್ರಿ ನರೆಂದ್ರ ಮೋದಿ ಅವರು ಕೆಲವೇ ಕೈಗಾರಿಕೋದ್ಯಮಗಳ ಸಾಲವನ್ನು ಮನ್ನಾ ಮಾಡಿದ ಸಂದರ್ಭದಲ್ಲಿ ಹೇಳಬೇಕಿತ್ತು.
ಸಾಲ ಮನ್ನ ಮಾಡಿದ ಹಣವನ್ನು ದೇಶದ ಅಭಿವೃದ್ಧಿಗೆ ಹಾಗೂ ವ್ಯವಸಾಯಕ್ಕೆ ಬಳಸಿ, ದೇಶದ ಬಡತನ ನಿವಾರಣೆಗೊಳಿಸಿ ಸಮ ಸಮಾಜ ನಿರ್ಮಾಣ ಮಾಡಿ ಎಂದು ಸಲಹೆ ನೀಡಿದ್ದರೆ, ನಾರಾಯಣ ಮೂರ್ತಿ ಅವರನ್ನು ಪ್ರಸಂಶೆ ಮಾಡಿ, ಅವರು ದೇಶದ ಸಂವಿಧಾನದ ಆಶಯಕ್ಕೆ ಅನುಗುಣವಾಗಿದ್ದಾರೆ ಎಂದು ಹೇಳಬಹುದಿತ್ತು. ಆದರೆ ಈ ರೀತಿಯಾಗಿ ಬಡವರ ಏಳಿಗೆಯ ಪರವಾಗಿರುವ ಸೌಲಭ್ಯಗಳನ್ನು ಅಣುಕಿಸಬಾರದು.
ದೇಶದ ಎಲ್ಲಾ ಜನರಿಗೆ ಸಂಪನ್ಮೂಲವನ್ನು ಹಂಚಬೇಕು ಎಂದು ನಮ್ಮ ಸಂವಿಧಾನ ಹೇಳಿದೆ. ಯಾರೋ ನಾಲ್ಕು ಜನರು ಸಂಪನ್ಮೂಲ ಕೂಡಿಟ್ಟುಕೊಂಡರೆ ಉಳಿದವರ ಏನು ಮಾಡಬೇಕು. ಗ್ರಾಮೀಣ ಭಾಗದ ಜನರು ಹಾಗೂ ಶತಮಾನಗಳಿಂದ ತುಳಿತಕ್ಕೊಳಗಾದವರ ಗತಿ ಏನಾಗಬೇಕು. ದಲಿತರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಸ್ಥಿತಿಗತಿಗಳು ಏನಾಗಬೇಕು. ಹೀಗಾಗಿ ಯಾರೋ ಒಬ್ಬರು ವಿರೋಧಿಸಿದ್ದಾರೆ ಎಂದು ಸಂವಿಧಾನದ ಆಶಯಗಳನ್ನು ಕಡೆಗಣಿಸಲಾಗದು.
ಪಂಚ ರಾಜ್ಯಗಳ ಚುನಾವಣಾ ಫಲಿತಾಂಶವು ಬಹುತೇಕ ಕಾಂಗ್ರೆಸ್ ಪರವಾಗಿ ಇದೆ. ಹತ್ತು ವರ್ಷಗಳ ಬಿಜೆಪಿ ಆಡಳಿತದಲ್ಲಿ ಬರೀ ಪೊಳ್ಳು ಮಾತು, ಸುಳ್ಳು ಭರವಸೆಗಳ ವ್ಯಾಪಕ ಪ್ರಚಾರ ಬಿಟ್ಟರೆ ತಳಹಂತದಲ್ಲಿ ಏನೂ ಬದಲಾವಣೆ ಆಗಿಲ್ಲ.

ಅವರು ಸಾರ್ವಜನಿಕ ಆಸ್ತಿಗಳನ್ನು ಮಾರಾಟ ಮಾಡಿದರು. ನೋಟು ಅಮಾನ್ಯೀಕರಣಗೊಳಿಸಿದರು. ಭಾವನಾತ್ಮಕ ವಿಷಯಗಳನ್ನು ಮುಂದೆ ತಂದರು. ಇವುಗಳಿಂದ ದಲಿತರ ಮೇಲಿನ ದೌರ್ಜನ್ಯವೇನು ಕಡಿಮೆಯಾಗಿಲ್ಲ. ರೂಪಾಯಿ ಮೌಲ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಳಿದಿಲ್ಲ. ಜನರು ಇದೆನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ರಾಜಕಾರಣ ಹೆಚ್ಚು ದಿನ ನಡೆಯುವುದಿಲ್ಲ.
ಜನರಿಗೆ ಬೇಕಿರುವುದು ಬಡತನ ಹಾಗೂ ಹಸಿವು ನಿವಾರಣೆ. ಅವರ ಬದುಕು ಕಟ್ಟಬೇಕು. ಗೌರವಯುತವಾಗಿ ಜೀವನ ನಡೆಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕು. ಆದರೆ ಬಿಜೆಪಿ ಆಡಳಿತದಲ್ಲಿ ಇದು ಯಾವುದನ್ನು ಸಹ ಕಾಣಲು ಸಾಧ್ಯವಾಗಲಿಲ್ಲ.ಅವರ ಆಡಳಿತ ವೈಫಲ್ಯವನ್ನು ಕಂಡು ಈ ಎಲ್ಲದರಿಂದ ಜನರು ಬೇಸತ್ತಿದ್ದಾರೆ. ಹೀಗಾಗಿ ಜನರು ಕಾಂಗ್ರೆಸ್ಸಿನ ಪರವಾಗಿದ್ದಾರೆ.
ಹೆಣ್ಣು ಭ್ರೂಣಹತ್ಯೆ ಪ್ರಕರಣವನ್ನು ನಮ್ಮ ಸರಕಾರ ಗಂಭೀರವಾಗಿ ಪರಿಗಣಿಸಿ ಸಿಐಡಿ ತನಿಖೆಗೆ ಒಳಪಡಿಸಿದೆ. ಕಾನೂನನ್ನು ಮೀರಿ ಈ ರೀತಿಯಾಗಿ ಭ್ರೂಣಹತ್ಯೆ ಮಾಡುವುದು ಅಕ್ರಮ ಹಾಗೂ ಅಪರಾಧ. ಈ ಅಪರಾಧ ಮಾಡಿದವರು ಖಂಡಿತ ಶಿಕ್ಷೆ ಅನುಭವಿಸಲಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಜಿಲ್ಲಾಮಟ್ಟದ ಸಮಿತಿ ರಚಿಸಿ ಎಲ್ಲಾ ಕ್ಲಿನಿಕ್‌ಗಳನ್ನು ಪ್ರತಿಯೊಂದು ಹಂತದಲ್ಲೂ ತನಿಖೆಗೆ ಒಳಪಡಿಸಿ ವರದಿ ಬಂದ ಕೂಡಲೇ ಸೂಕ್ತ ಕ್ರಮವಹಿಸಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ.
ವರದಿ :ನಂದಿನಿ ಮೈಸೂರು
https://whatsapp.com/channel/0029VaA61PAC6ZvhcEyEjS0S To Join Hind- Samachar What’s up Channel click the above link

ವಿಳಾಸ: ಮುಖ್ಯ ಕಚೇರಿ: ನಂ ,356/10 ಸಿ,ವೈಕುಂಠ ಧಾಮ ಪಕ್ಕದಲ್ಲಿ ಹಳೆ. ಪಿ .ಬಿ .ರಸ್ತೆ, ದಾವಣಗೆರೆ -577 006. ಶಾಖೆ ವೀರರಾಣಿ ಕೆಳದಿ ಚೆನ್ನಮ್ಮ ರಸ್ತೆ ಶುಭ ಮಂಗಳ ಮಂಟಪದ ಹತ್ತಿರ ವಿನೋಬನಗರ ಶಿವಮೊಗ್ಗ -577 204

