ಮೈಸೂರು : ಮೈಸೂರಿನಲ್ಲಿ ಇಂದು ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಭಾಷಣ.
ಕಳೆದ 2013ರ ಚುನಾವಣೆಯಲ್ಲಿ ಚಾಮರಾಜನಗರ ಮತ್ತು ಮೈಸೂರಿನ 15 ಸ್ಥಾನಗಳಲ್ಲಿ 12 ಸ್ಥಾನಗಳನ್ನು ನಾವು ಗೆದ್ದಿದ್ದೆವು. ಜನರ ಉತ್ಸಾಹವನ್ನು ನೋಡಿದಾಗ ಈ ಬಾರಿ 15ಕ್ಕೆ 15 ಸ್ಥಾನಗಳನ್ನು ನಾವು ಗೆಲ್ಲುತ್ತೇವೆ ಎನ್ನುವ ವಿಶ್ವಾಸ ಮೂಡುತ್ತಿದೆ. ಬೇರೆ ಪಕ್ಷಗಳು ಏನೇ ಹೇಳಿದರೂ ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಗಾಳಿ ಬೀಸಲು ಆರಂಭವಾಗಿದೆ, ಇದು ಸತ್ಯ. ಬಿಜೆಪಿಯ ದುರಾಡಳಿತ, ಭ್ರಷ್ಟಾಚಾರ, ನಿಷ್ಕ್ರಿಯತೆಗಳಿಂದ ಜನ ಬೇಸತ್ತಿದ್ದಾರೆ. ಈ ಸರ್ಕಾರ ಆದಷ್ಟು ಬೇಗ ತೊಲಗಲಿ ಎಂದು ಜನ ಮಾತನಾಡುತ್ತಿದ್ದಾರೆ. ಇದು ರಾಜಕೀಯ ಹೇಳಿಕೆ ಅಲ್ಲ, ಜನರ ಪ್ರತಿಕ್ರಿಯೆ ಮತ್ತು ಉತ್ಸಾಹವನ್ನು ಕಂಡು ಹೇಳುತ್ತಿರುವ ಮಾತು.
ಬಿಜೆಪಿಯದು ಅನೈತಿಕ ಮಾರ್ಗದ ಮೂಲಕ ರಚನೆಯಾದ ಸರ್ಕಾರ. ಆಪರೇಷನ್ ಕಮಲದ ಮೂಲಕ ನಮ್ಮ ಶಾಸಕರನ್ನು ಕೊಂಡುಕೊಂಡು ಸರ್ಕಾರ ಮಾಡಿದ್ದಾರೆ. ನಮ್ಮ ಪಕ್ಷಕ್ಕೆ 38.18% ಮತಗಳು, ಬಿಜೆಪಿಗೆ 36.42% ಮತಗಳು ಬಂದಿತ್ತು. ಅಂದರೆ ಜನರ ಒಲವು ಕಾಂಗ್ರೆಸ್ ಪಕ್ಷದ ಪರವಾಗಿತ್ತು ಎಂಬುದನ್ನು ತೋರುತ್ತದೆ. ನಮ್ಮ ಪಕ್ಷ 80 ಸ್ಥಾನಗಳಲ್ಲಿ ಜಯಗಳಿಸಿದರೂ ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಏಕೈಕ ಕಾರಣಕ್ಕೆ 37 ಸ್ಥಾನಗಳಲ್ಲಿ ಗೆದ್ದಿದ್ದ ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಿ, ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದ್ದೆವು. ಕುಮಾರಸ್ವಾಮಿ ಅವರು ಶಾಸಕರನ್ನು, ಮಂತ್ರಿಗಳನ್ನು, ಕಾಂಗ್ರೆಸ್ ನವರನ್ನು, ಅಷ್ಟೇ ಏಕೆ ಸಮನ್ವಯ ಸಮಿತಿ ಅಧ್ಯಕ್ಷನಾಗಿದ್ದ ನನ್ನನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಹಾಗಾಗಿ ಶಾಸಕರು ಬೇಸತ್ತು ಕುಮಾರಸ್ವಾಮಿ ವಿರುದ್ಧ ತಿರುಗಿಬಿದ್ದರು. ಕುಮಾರಸ್ವಾಮಿ 1 ವರ್ಷ 2 ತಿಂಗಳು ವೆಸ್ಟೆಂಡ್ ಹೋಟೆಲ್ ನಲ್ಲಿದ್ದು, ಶಾಸಕರು, ಸಚಿವರ ಭೇಟಿಗೆ ಅವಕಾಶ ನೀಡುತ್ತಿರಲಿಲ್ಲ. ಹೀಗಾಗಿ ಅವರಿಂದ ಅಧಿಕಾರವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. 14 ಜನ ಕಾಂಗ್ರೆಸ್ ಶಾಸಕರು ಮತ್ತು 3 ಜನ ಜೆಡಿಎಸ್ ಶಾಸಕರು ದುಡ್ಡು ಮತ್ತು ಅಧಿಕಾರದಾಸೆಗೆ ಪಕ್ಷ ಬಿಟ್ಟು ಬಿಜೆಪಿ ಸೇರಿದರು.
ಕಾಂಗ್ರೆಸ್ ನ ಶಾಸಕರನ್ನು ಸಿದ್ದರಾಮಯ್ಯ ಅವರೇ ಬಿಜೆಪಿಗೆ ಕಳಿಸಿದ್ದು ಎಂದು ಸಿ.ಎಂ ಇಬ್ರಾಹಿಂ ಹೇಳಿದ್ದಾರೆ, ಕಾಂಗ್ರೆಸ್ ನವರನ್ನು ನಾನು ಕಳಿಸಿದ್ದಾದರೆ ಜೆಡಿಎಸ್ ನವರನ್ನು ಕುಮಾರಸ್ವಾಮಿ ಅವರು ಕಳಿಸಿದ್ದಾ? ಮಾನ ಮರ್ಯಾದಿ ಇದೆಯಾ ಇವರಿಗೆ? ಸುಳ್ಳು ಹೇಳಲು ಒಂದು ಮಿತಿ ಬೇಡ್ವಾ? ಕೊಟ್ಟ ಕುದುರೆ ಏರಲಾಗದವನು ವೀರನೂ ಅಲ್ಲ, ಶೂರನೂ ಅಲ್ಲ.
ಈಗ ಕುಮಾರಸ್ವಾಮಿ ಅವರು ಪಂಚರತ್ನ ಮಾಡುತ್ತಿದ್ದಾರೆ. ಹಿಂದೆ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ಪಂಚರತ್ನ ನೆನಪಾಗಲಿಲ್ವಾ? ಇಂದು ರಾಜ್ಯದಲ್ಲಿ ಬಿಜೆಪಿ ಪಕ್ಷ ಬೆಳೆಯಲು ಕುಮಾರಸ್ವಾಮಿ ಕಾರಣ. 2006ರಲ್ಲಿ ಬಿಜೆಪಿ ಜೊತೆ ಸೇರಿ ಕುಮಾರಸ್ವಾಮಿ ಸರ್ಕಾರ ಮಾಡಿಲ್ವಾ? ಕೋಮುವಾದಿಗಳ ಜೊತೆ ಹೋಗಿ ಸರ್ಕಾರ ಮಾಡಿದ ಮೇಲೆ ಜೆಡಿಎಸ್ ಜಾತ್ಯತೀತ ಪಕ್ಷ ಹೇಗಾಗುತ್ತೆ?
ಜೆಡಿಎಸ್ ನವರು ಗೆದ್ದವರ ಹಿಂದೆ ಹೋಗುವವರು. ನಾವಂತು ಮುಂದೆ ಜೆಡಿಎಸ್ ಜೊತೆ ಕೈಜೋಡಿಸುವುದಿಲ್ಲ. ಜೆಡಿಎಸ್ ನಂಬಿಕೆಗೆ ಅರ್ಹವಾದ ಪಕ್ಷ ಅಲ್ಲ, ಅವರ ಜೊತೆ ಸೇರಿ ಸರ್ಕಾರ ಮಾಡುವುದು ಬೇಡ ಎಂದು ಹಿಂದೆಯೇ ನಾನು ನಮ್ಮ ಪಕ್ಷದ ಹೈಕಮಾಂಡ್ ನವರಿಗೆ ಹೇಳಿದ್ದೆ, ಲೋಕಸಭಾ ಚುನಾವಣೆಯಲ್ಲೂ ಜೆಡಿಎಸ್ ಜೊತೆ ಮೈತ್ರಿ ಬೇಡ ಎಂದು ಹೇಳಿದ್ದೆ. ಆದರೆ ಹೈಕಮಾಂಡ್ ನವರು ಕೇಳಿಲ್ಲ. ಜೆಡಿಎಸ್ ನವರಿಂದಾಗಿ ಇಂದು ರಾಜ್ಯದ ಜನ ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಮುಂದೆ ನಾವು 123 ಸ್ಥಾನ ಗೆಲ್ಲುತ್ತೇವೆ ಎಂದು ಕುಮಾರಸ್ವಾಮಿ ಹೇಳುತ್ತಾರೆ, ನಾವೆಲ್ಲ ಇದ್ದಾಗಲೇ ಜೆಡಿಎಸ್ ಗೆದ್ದಿದ್ದು 59 ಸ್ಥಾನ, ಈ ಬಾರಿ ಹೆಚ್ಚೆಂದರೆ 23 ಸ್ಥಾನ ಗೆಲ್ಲಬಹುದು. ಜೆಡಿಎಸ್ ಗೆ ಯಾವುದೇ ಸಿದ್ಧಾಂತಗಳು ಇಲ್ಲ. ಹಾಗಾಗಿ ಜೆಡಿಎಸ್ ಗೆ ಮತ ಹಾಕಿದರೆ ಅದು ಬಿಜೆಪಿಗೆ ಬೆಂಬಲ ನೀಡಿದಂತಾಗುತ್ತದೆ. ಇತ್ತಿಚಿನ ಜನರ ಒಲವನ್ನು ನೋಡಿದರೆ ಈಗ ನನಗೆ ಒಂದಂತು ಖಾತ್ರಿಯಾಗಿದೆ, ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ, ಮುಂದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ.
ಮೈಸೂರಿನಲ್ಲಿ ಜಿಲ್ಲಾಸ್ಪತ್ರೆ, ಜೈದೇವಾ ಆಸ್ಪತ್ರೆ, ಡ್ರಾಮಾ ಸೆಂಟರ್, ಮಹಾರಾಣಿ ಕಾಲೇಜು, ಹಾಸ್ಟೆಲ್, ರಾಜಮಾರ್ಗ ಮಾಡಿದವರು ನಾವು. ಬಿಜೆಪಿ ಪಕ್ಷ ಮೈಸೂರಿಗೆ ಏನು ಮಾಡಿದೆ? ವರ್ಗಾವಣೆ, ಗುತ್ತಿಗೆ ಕಾಮಗಾರಿ, ಬಡ್ತಿ, ನೇಮಕಾತಿಗಳಲ್ಲಿ ಲಂಚ ಹೊಡೆದಿದ್ದು ಮಾತ್ರ ಬಿಜೆಪಿ ಸಾಧನೆ. ಬಸವರಾಜ ಬೊಮ್ಮಾಯಿ ಅವರ ಮಂತ್ರಿಮಂಡಲ ಅಲಿಬಾಬಾ ಮತ್ತು 40 ಮಂದಿ ಕಳ್ಳರ ಕೂಟ. ಇಂಥಾ ಸರ್ಕಾರ ಬೇಕಾ?
ಹಿಂದಿನ ನಮ್ಮ ಸರ್ಕಾರ ಜಾರಿ ಮಾಡಿದ್ದ ಹಲವು ಕಾರ್ಯಕ್ರಮಗಳನ್ನು ಬಿಜೆಪಿ ನಿಲ್ಲಿಸಿದೆ, ಈಗ ಸ್ಥಗಿತಗೊಂಡಿರುವ ನಮ್ಮ ಸರ್ಕಾರದ ಎಲ್ಲಾ ಕಾರ್ಯಕ್ರಮವನ್ನು ಮರುಜಾರಿ ಮಾಡುವ ಕೆಲಸ ಮಾಡುತ್ತೇವೆ. ಇದರ ಜೊತೆಗೆ 200 ಯುನಿಟ್ ಉಚಿತವಾಗಿ ವಿದ್ಯುತ್ ನೀಡುತ್ತೇವೆ, ಪ್ರತೀ ವ್ಯಕ್ತಿಗೆ ತಲಾ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ, ಮನೆಯ ಯಜಮಾನಿಗೆ ತಿಂಗಳಿಗೆ 2,000 ದಂತೆ ವರ್ಷಕ್ಕೆ 24,000 ರೂ. ನೀಡುತ್ತೇವೆ. ಈ ಯೋಜನೆಯನ್ನು ಜಾರಿ ಮಾಡಲು ಆಗಲ್ಲ ಎಂದು ಬಿಜೆಪಿಯವರು ಹೇಳಿಕೊಂಡು ತಿರುಗಾಡುತ್ತಿದ್ದಾರೆ, ಹಿಂದೆ ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಒಂದೇ ಗಂಟೆಯೊಳಗೆ ಅನ್ನಭಾಗ್ಯ, ಕೃಷಿ ಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಸಾಲಮನ್ನಾ ಯೋಜನೆಗಳನ್ನು ಘೋಷಣೆ ಮಾಡಿದ್ದೆ, ನಮ್ಮ ಪ್ರಣಾಳಿಕೆಯ 165 ಭರವಸೆಗಳಲ್ಲಿ 158 ಭರವಸೆಗಳನ್ನು ಐದೇ ವರ್ಷಗಳಲ್ಲಿ ಈಡೇರಿಸಿದ್ದೆವು ಮತ್ತು ಹೆಚ್ಚುವರಿ 30 ಕಾರ್ಯಕ್ರಮಗಳನ್ನು ಜಾರಿ ಮಾಡಿ ನುಡಿದಂತೆ ನಡೆದಿದ್ದೆವು. ನಾವು ಬಸವಾದಿ ಶರಣರ ತತ್ವಗಳಲ್ಲಿ ನಂಬಿಕೆ ಇಟ್ಟುಕೊಂಡವರು. ನಾವು ಕೊಟ್ಟ ಮಾತಿನಂತೆ ಖಂಡಿತಾ ನಡೆದುಕೊಳ್ಳುತ್ತೇವೆ.
ಮೈಸೂರಿನ ಉಳಿದ ಮೂರೂ ಕ್ಷೇತ್ರಗಳಲ್ಲಿ ಗೆಲ್ಲಿಸಿಕೊಟ್ಟರೆ ಮೈಸೂರಿನಲ್ಲಿ ಯಾವೆಲ್ಲ ಕೆಲಸಗಳು ಬಾಕಿ ಇವೆ ಅವೆಲ್ಲವನ್ನೂ ನಾವು ಮಾಡಿ ಪೂರೈಸುತ್ತೇವೆ. ಮುಂದೆ ಅಧಿಕಾರಕ್ಕೆ ಬಂದರೆ ಶಾದಿಭಾಗ್ಯವನ್ನು ಮುಂದುವರೆಸುತ್ತೇವೆ, ಮೊದಲ ವರ್ಷದಲ್ಲೇ ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಗಳಿಗೆ ನೀಡುವ ಅನುದಾನವನ್ನು 5000 ಕೋಟಿ ರೂ. ಗೆ ಹೆಚ್ಚು ಮಾಡುತ್ತೇವೆ, ನಂತರದ ವರ್ಷಗಳಲ್ಲಿ ಇದನ್ನು 10,000 ಕೋಟಿ ರೂ. ವರೆಗೂ ಏರಿಕೆ ಮಾಡುತ್ತೇವೆ. ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಹೋದರೆ ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇವೆ. ಇದು ನಮ್ಮ ಬದ್ಧತೆ.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

