ಮಾರೀಜಾತ್ರೆಯ ವೇಳೆ ಸಂಪ್ರದಾಯಕ್ಕೆ ಅಡ್ಡಿಪಡಿಸುವುದು ಅಕ್ಷಮ್ಯ: ಭಕ್ತಿ ಜೊತೆಗೆ ಭಯವೂ ಅಗತ್ಯವೆಂದು ಭಕ್ತರ ಎಚ್ಚರಿಕೆ– ಜಗದೀಶ್ ಭಟ್ ಸಾಗರ

ಮಾರೀಜಾತ್ರೆಯ ವೇಳೆ ಸಂಪ್ರದಾಯಕ್ಕೆ ಅಡ್ಡಿಪಡಿಸುವುದು ಅಕ್ಷಮ್ಯ: ಭಕ್ತಿ ಜೊತೆಗೆ ಭಯವೂ ಅಗತ್ಯವೆಂದು ಭಕ್ತರ ಎಚ್ಚರಿಕೆ
– ಜಗದೀಶ್ ಭಟ್ ಸಾಗರ

ಸಾಗರ:- ಮಾರೀಜಾತ್ರೆಯಂತಹ ಪುರಾತನ ಜಾನಪದೀಯ ಹಾಗೂ ಶಾಸ್ತ್ರೀಯ ಸಂಪ್ರದಾಯಗಳನ್ನು ಪಾಲಿಸುವ ಸಂದರ್ಭದಲ್ಲಿ ಯಾವುದೇ ರೀತಿಯ ಅಡ್ಡಿಪಡಿಸುವುದು ಅಕ್ಷಮ್ಯ ಅಪರಾಧವಾಗಿದ್ದು, ಅದು ಇಡೀ ಊರಿಗೆ ಅನಾಹುತ ಉಂಟುಮಾಡುವ ಸಾಧ್ಯತೆ ಇದೆ ಎಂದು ಸ್ಥಳೀಯ ಭಕ್ತರು ಹಾಗೂ ಹಿರಿಯರು ತೀವ್ರ ಎಚ್ಚರಿಕೆ ನೀಡಿದ್ದಾರೆ.

ಮಾರಿಯಮ್ಮನವರ ಮತ್ತು ಮಂಡಲದ ನಡುವೆ ಯಾರೂ ಮಧ್ಯ ಪ್ರವೇಶಿಸಬಾರದು. ವಿಶೇಷವಾಗಿ ಮಕ್ಕಳು ಅಲ್ಲಿ ಇರಬಾರದು, ಏಕೆಂದರೆ ಈ ಸಂದರ್ಭ ಅತ್ಯಂತ ಅಪಾಯಕಾರಿ ಎಂದು ಅವರು ತಿಳಿಸಿದ್ದಾರೆ. “ಇದು ತಮಾಷೆಯ ವಿಷಯವಲ್ಲ. ಯಾವುದೇ ಅಪಘಾತ ಸಂಭವಿಸಿದರೆ, ಅಧಿಕಾರಿಗಳಾಗಲಿ ಅಥವಾ ಸಮಿತಿಯವರಾಗಲಿ ಯಾರೂ ಹೊಣೆ ಹೊತ್ತುಕೊಳ್ಳುವುದಿಲ್ಲ,” ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾರೀಜಾತ್ರೆ ಎಂಬುದು ಊರಿನ ರೋಗರುಜಿನಗಳು ಹಾಗೂ ಸಾಂಕ್ರಾಮಿಕ ಪಿಡುಗುಗಳನ್ನು ದೂರ ಮಾಡಿ, ಸಮಸ್ತ ಜನತೆ ಸುಖ-ಸಂತೋಷದಿಂದ ಬದುಕಬೇಕೆಂಬ ನಂಬಿಕೆಯಿಂದ ನಡೆಯುವ ವಿಶಿಷ್ಟ ಜಾನಪದೀಯ ಆಚರಣೆ. ಅಂತಹ ಪವಿತ್ರ ಕಾರ್ಯಕ್ಕೆ ಅಡ್ಡಿಪಡಿಸಿ, ಎಲ್ಲರೂ ಎದುರಿನಲ್ಲಿ ಕುಳಿತು ಜಾತ್ರೆಯನ್ನು ತಡೆಯುವುದಾದರೆ, ಜಾತ್ರೆಯ ಉದ್ದೇಶವೇ ನಶಿಸುತ್ತದೆ ಎಂದು ತಿಳಿಸಲಾಗಿದೆ.

ಅಧಿಕಾರಿಗಳು, ಸಮಿತಿಯ ಸದಸ್ಯರು ಹಾಗೂ ವಿಐಪಿ ವ್ಯಕ್ತಿಗಳು ಫೋಟೋ ತೆಗೆಸಿಕೊಳ್ಳಲು ಬಯಸಿದರೆ, ಸಾಂಸ್ಕೃತಿಕ ವೇದಿಕೆಯಲ್ಲಿ ಧಾರಾಳವಾಗಿ ಫೋಸ್ ನೀಡಬಹುದು. ಆದರೆ ಮಾರಿಯಮ್ಮನವರ ಎದುರಿಗೆ ಅಧಿಕಾರದ ದರ್ಪ ತೋರಿಸುವುದು ಯಾರಿಗೂ ಒಳ್ಳೆಯದಲ್ಲ. ಅದು ವ್ಯಕ್ತಿಗೆ ಮಾತ್ರವಲ್ಲ, ಅವರ ಕುಟುಂಬಕ್ಕೂ, ಮನೆತನಕ್ಕೂ ಹಾಗೂ ಇಡೀ ಊರಿಗೂ ಹಾನಿಕಾರಕವಾಗಬಹುದು ಎಂದು ಎಚ್ಚರಿಸಲಾಗಿದೆ.

“ಇದೀಗ ಆಗಿದ್ದು ಆಗಿ ಹೋಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು,” ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ, ಮಾರಿಯಮ್ಮನ ಕುರಿತು ಭಕ್ತಿ ಮಾತ್ರವಲ್ಲ, ಭಯವೂ ಅಗತ್ಯವೆಂದು ಭಕ್ತರು ಒತ್ತಿ ಹೇಳಿದ್ದಾರೆ.

“ನಾವು ತಾಯಿಯ ದಾಸರೇ ಹೊರತು, ತಾಯಿ ನಮ್ಮ ದಾಸಿಯಲ್ಲ,” ಎಂಬ ಸಂದೇಶದೊಂದಿಗೆ, ತಾಯಿ ಎಲ್ಲರನ್ನೂ ಕಾಪಾಡಲಿ ಎಂದು ಪ್ರಾರ್ಥನೆ ಸಲ್ಲಿಸಲಾಗಿದೆ.

ವರದಿ : ಮೇಘನ ಗಣೇಶ್

Leave a Reply

Your email address will not be published. Required fields are marked *