🏫 ಕರ್ನಾಟಕ ಮಾನವ ಹಕ್ಕುಗಳ ಸಮಿತಿಯ ಶ್ರೀನಿವಾಸ ಗೌಡರಿಂದ ಎಚ್ಚರಿಕೆ: ಶಿಥಿಲಗೊಂಡ ಶಾಲಾ ಕೊಠಡಿಗಳಿಗೆ ತಕ್ಷಣ ದುರಸ್ತಿ ಆಗ್ರಹ

🏫 ಕರ್ನಾಟಕ ಮಾನವ ಹಕ್ಕುಗಳ ಸಮಿತಿಯ ಶ್ರೀನಿವಾಸ ಗೌಡರಿಂದ ಎಚ್ಚರಿಕೆ: ಶಿಥಿಲಗೊಂಡ ಶಾಲಾ ಕೊಠಡಿಗಳಿಗೆ ತಕ್ಷಣ ದುರಸ್ತಿ ಆಗ್ರಹ

ಹಿಂದ್ ಸಮಾಚಾರ ನ್ಯೂಸ್ ಡೆಸ್ಕ್ | ಬಾಗಲಕೋಟೆ | ಮಾರ್ಚ್ 2026:

ಬಾಗಲಕೋಟೆ: ಜಿಲ್ಲೆಯ ಬೀಳಗಿ ತಾಲೂಕಿನ ತೆಗ್ಗಿ ತಾಂಡಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ ಬಗ್ಗೆ ಕರ್ನಾಟಕ ಮಾನವ ಹಕ್ಕುಗಳ ಸಮಿತಿ ಗಂಭೀರ ಆತಂಕ ವ್ಯಕ್ತಪಡಿಸಿದೆ. ಸಮಿತಿಯ ರಾಜ್ಯಾಧ್ಯಕ್ಷರಾದ ಶ್ರೀನಿವಾಸ ಗೌಡ ಅವರು ವಿದ್ಯಾರ್ಥಿಗಳ ಸುರಕ್ಷತೆಗಾಗಿ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಸುಮಾರು 100 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವ ಈ ಶಾಲೆಯಲ್ಲಿ ಇರುವ ನಾಲ್ಕು ಕೊಠಡಿಗಳ ಚಾವಣಿ ಸಂಪೂರ್ಣ ಶಿಥಿಲಗೊಂಡಿದ್ದು, ಯಾವ ಕ್ಷಣದಲ್ಲಾದರೂ ಕುಸಿಯುವ ಅಪಾಯವಿದೆ. ಮಳೆಗಾಲ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಈ ಪರಿಸ್ಥಿತಿ ಇನ್ನಷ್ಟು ಆತಂಕಕಾರಿ ಆಗಿದೆ.

ಈ ಬಗ್ಗೆ ಶಿಕ್ಷಕರು ಹಾಗೂ ಗ್ರಾಮಸ್ಥರು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಸಾರ್ವಜನಿಕರಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಶ್ರೀನಿವಾಸ ಗೌಡ ಅವರು ಬೀಳಗಿ ತಾಲೂಕಿನ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಚರ್ಚಿಸಿ, ತಕ್ಷಣ ದುರಸ್ತಿ ಕಾರ್ಯ ಆರಂಭಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸ್ಥಳೀಯ ಪಿಡಿಓ ಶೀಘ್ರದಲ್ಲೇ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಯಾವುದೇ ಅನಾಹುತ ಸಂಭವಿಸಿದರೆ ಅದರ ಸಂಪೂರ್ಣ ಹೊಣೆಗಾರಿಕೆಯನ್ನು ಸಂಬಂಧಪಟ್ಟ ಅಧಿಕಾರಿಗಳೇ ಹೊರುವಂತೆ ಎಚ್ಚರಿಸಿದ ಗೌಡ ಅವರು, ಕೂಡಲೇ ಕ್ರಮ ಕೈಗೊಳ್ಳದಿದ್ದರೆ ರಾಜ್ಯದ ಶಾಲಾ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರಿಗೆ ಲಿಖಿತ ದೂರು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಸುನಿಲ್ ರಾಥೋಡ್, ನಂದ ಚೌಹಾಣ್, ಶಾಂತಮ್ಮ ಹಾಗೂ ಯಮುನಮ್ಮ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಫೋಟೋಗಳೊಂದಿಗೆ ವರದಿ ಸಲ್ಲಿಸಿದ್ದಾರೆ.

ಕರ್ನಾಟಕ ಮಾನವ ಹಕ್ಕುಗಳ ಸಮಿತಿ ಈ ಸಮಸ್ಯೆಯನ್ನು ತಕ್ಷಣ ಬಗೆಹರಿಸಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸುವಂತೆ ಅಧಿಕಾರಿಗಳನ್ನು ಆಗ್ರಹಿಸಿದೆ.

ವರದಿ : ಮೇಘನ ಗಣೇಶ್

Leave a Reply

Your email address will not be published. Required fields are marked *