ಕರ್ತವ್ಯನಿಷ್ಠೆ ಮತ್ತು ಸಮಯಪ್ರಜ್ಞೆಯಿಂದ ಮಹಿಳೆಯ ಜೀವ ಉಳಿಸಿದ ಇ.ಆರ್.ಎಸ್.ಎಸ್ ಅಧಿಕಾರಿಗಳಿಗೆ ಸನ್ಮಾನ
ಶಿವಮೊಗ್ಗ | ದಿನಾಂಕ: 29 ಜನವರಿ 2026 :- ಮಲವಗೊಪ್ಪ ಗ್ರಾಮದ ನಿವಾಸಿ ಮಹಿಳೆಯೊಬ್ಬರು ಕಳೆನಾಶಕ ವಿಷ ಸೇವಿಸಿದ್ದ ಗಂಭೀರ ಘಟನೆಗೆ ಸಂಬಂಧಿಸಿ, ಇ.ಆರ್.ಎಸ್.ಎಸ್ (ತುರ್ತು ಪ್ರತಿಕ್ರಿಯೆ ಸಹಾಯ ವ್ಯವಸ್ಥೆ) ಅಧಿಕಾರಿಗಳು ಸಮಯಪ್ರಜ್ಞೆ ಹಾಗೂ ಕರ್ತವ್ಯನಿಷ್ಠೆಯಿಂದ ತಕ್ಷಣ ಸ್ಪಂದಿಸಿ, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ದೊರಕುವಂತೆ ಮಾಡಿದ್ದು, ಆಕೆಯ ಅಮೂಲ್ಯ ಜೀವವನ್ನು ಉಳಿಸಲು ಕಾರಣರಾದರು.
ಈ ಶ್ಲಾಘನೀಯ ಕಾರ್ಯಕ್ಕಾಗಿ ಇ.ಆರ್.ಎಸ್.ಎಸ್‌ನ ಅಧಿಕಾರಿಗಳಾದ ಶಬ್ಬೀರ್ ಬೇಗ್, ಸಿ.ಎಚ್.ಸಿ., ತುಂಗಾನಗರ ಪೊಲೀಸ್ ಠಾಣೆ ಹಾಗೂ ಜಯಂತ್ ಎ., ಎಚ್.ಸಿ., ಡಿಎಆರ್, ಶಿವಮೊಗ್ಗ ರವರನ್ನು ಇಂದು ದಿನಾಂಕ 29-01-2026 ರಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳು ಮಾತನಾಡಿ, ಪೊಲೀಸ್ ಸಿಬ್ಬಂದಿಯ ಮಾನವೀಯತೆ, ಸೇವಾ ಮನೋಭಾವ ಮತ್ತು ಸಾರ್ವಜನಿಕ ಸುರಕ್ಷತೆಯ ಮೇಲಿನ ಬದ್ಧತೆಯನ್ನು ಈ ಘಟನೆ ಸ್ಪಷ್ಟಪಡಿಸುತ್ತದೆ ಎಂದರು. ತುರ್ತು ಪರಿಸ್ಥಿತಿಗಳಲ್ಲಿ 112 ಸೇವೆಯ ಮಹತ್ವವನ್ನು ಕೂಡ ಅವರು ವಿಶೇಷವಾಗಿ ಪ್ರಶಂಸಿಸಿದರು.
ಸರಿಯಾದ ಸಮಯದಲ್ಲಿ ಕೈಗೊಂಡ ತ್ವರಿತ ಕ್ರಮದಿಂದ ಅಮೂಲ್ಯ ಜೀವವನ್ನು ಉಳಿಸಬಹುದು ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆಯಾಗಿದೆ.

ವರದಿ:- ಪ್ರವೀಣ್ ಶಿವಲಿಂಗಯ್ಯ



