ಭದ್ರಾವತಿ ನ್ಯೂಟೌನ್ ಪೊಲೀಸರ ಕಾರ್ಯಾಚರಣೆ: 11 ಪ್ರಕರಣಗಳ ಭೇದ, ಆರೋಪಿಯ ಬಂಧನ
ಭದ್ರಾವತಿ | ಮಾರ್ಚ್ 2026:
ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯವರು ಯಶಸ್ವಿ ಕಾರ್ಯಾಚರಣೆ ನಡೆಸಿ ಜಾನುವಾರು ಹಾಗೂ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ, ಒಟ್ಟು 11 ಪ್ರಕರಣಗಳನ್ನು ಭೇದಿಸಿದ್ದಾರೆ.
2025 ಸೆಪ್ಟೆಂಬರ್ 24ರಂದು ಭದ್ರಾವತಿ ತಾಲೂಕಿನ ಹೊಸಸಿದ್ದಾಪುರ ಗ್ರಾಮದಲ್ಲಿ ರಂಜಿತ್ (35) ಅವರಿಗೆ ಸೇರಿದ ಕೊಟ್ಟಿಗೆಯಿಂದ 2 ಹಸುಗಳು ಹಾಗೂ 1 ಕರು ಕಳ್ಳತನವಾಗಿದ್ದ ಕುರಿತು ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿತ್ತು.

ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ. ಐಪಿಎಸ್ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಎ.ಜಿ. ಕಾರಿಯಪ್ಪ ಹಾಗೂ ರಮೇಶ್ ಕುಮಾರ್ ಎಸ್ ಅವರ ಸಹಕಾರದೊಂದಿಗೆ, ಉಪಾಧೀಕ್ಷಕ ಪ್ರಕಾಶ್ ರಾಥೋಡ್ ಮತ್ತು ಸಿ.ಪಿ.ಐ ನಾಗಮ್ಮ ಅವರ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡ ರಚಿಸಲಾಯಿತು.
ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರಮೇಶ್ ಟಿ ಅವರ ನೇತೃತ್ವದ ತಂಡ ಆರೋಪಿಯಾದ ದಿಲೀಪ್ ಎಸ್ @ ಕರಿಯ (20)ನನ್ನು ಬಂಧಿಸಿದೆ. ತನಿಖೆಯ ವೇಳೆ ಈತನಿಂದ 5 ಜಾನುವಾರು ಕಳ್ಳತನ ಪ್ರಕರಣಗಳು, 4 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳು, 1 ಕೊಲೆ ಯತ್ನ ಹಾಗೂ 1 ಹಲ್ಲೆ ಪ್ರಕರಣ ಸೇರಿದಂತೆ ಒಟ್ಟು 11 ಪ್ರಕರಣಗಳು ಬೆಳಕಿಗೆ ಬಂದಿವೆ.
ಪೊಲೀಸರು ಆರೋಪಿಯಿಂದ ರೂ. 20,500 ನಗದು ಹಾಗೂ ಸುಮಾರು ರೂ. 95,500 ಮೌಲ್ಯದ 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು ರೂ. 1,16,000 ಮೌಲ್ಯದ ಮಾಲು ಪತ್ತೆಯಾಗಿದೆ.
ಈ ಯಶಸ್ವಿ ಕಾರ್ಯಾಚರಣೆಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು ತಂಡದ ಕಾರ್ಯವನ್ನು ಶ್ಲಾಘಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಹಿಂದ್ ಸಮಾಚಾರ್ ನ್ಯೂಸ್

ವರದಿ:- ಪ್ರವೀಣ್ ಶಿವಲಿಂಗಯ್ಯ



