ಶ್ರೀಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನ ಚುನಾವಣೆ ಹಿನ್ನೆಲೆ ಪತ್ರಿಕಾಗೋಷ್ಠಿ

ಶ್ರೀಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನ ಚುನಾವಣೆ ಹಿನ್ನೆಲೆ ಪತ್ರಿಕಾಗೋಷ್ಠಿ

ಸಾಗರ | ಮಾರ್ಚ್ 6:

ಸಾಗರದ ಶ್ರೀ ಮಾರಿಕಾಂಬ ದೇವಸ್ಥಾನದ ಆಡಳಿತ ಮಂಡಳಿ ಆಗಿರುವ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ 2026–29 ಅವಧಿಯ ಚುನಾವಣೆಯನ್ನು ಮಾರ್ಚ್ 8ರಂದು ನಡೆಸಲಾಗುತ್ತಿದೆ. ಈ ಹಿನ್ನೆಲೆ ಶ್ರೀ ಮಾರಿಕಾಂಬ ಹಿತರಕ್ಷಣಾ ಸಮಿತಿ ಬೆಂಬಲಿತ ಅಭ್ಯರ್ಥಿಗಳು ಪತ್ರಿಕಾಗೋಷ್ಠಿ ನಡೆಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಂ.ಡಿ. ಆನಂದ ಅವರು, ಕಳೆದ 13 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಹಾಲಿ ಸಮಿತಿ ಅಧಿಕಾರವನ್ನು ಬಿಟ್ಟುಕೊಡದೇ ಮುಂದುವರಿಸಿಕೊಂಡು ಬಂದಿದೆ ಎಂದು ಆರೋಪಿಸಿದರು. ಮಾರಿಕಾಂಬಾ ಜಾತ್ರೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಆಡಳಿತ ನಡೆಸಿರುವುದರಿಂದ ಸಂಸ್ಥೆಗೆ ಒಳ್ಳೆಯ ಹೆಸರು ತರಲು ವಿಫಲವಾಗಿದೆ ಎಂದು ಹೇಳಿದರು.

ಈ ಬಗ್ಗೆ ಕಳೆದ ಹತ್ತು ವರ್ಷಗಳಿಂದ ಶ್ರೀ ಮಾರಿಕಾಂಬ ಹಿತರಕ್ಷಣಾ ಸಮಿತಿ ನ್ಯಾಯಾಲಯದಲ್ಲಿ ಹೋರಾಟ ನಡೆಸಿದ್ದು, ಅಂತಿಮವಾಗಿ ನ್ಯಾಯಾಲಯ ಚುನಾವಣೆಯನ್ನು ನಡೆಸುವಂತೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಇದೀಗ ಚುನಾವಣೆ ನಡೆಯುತ್ತಿದೆ ಎಂದು ತಿಳಿಸಿದರು.

ಇನ್ನೊಂದೆಡೆ ವಿ. ಶಂಕರ್ ಮಾತನಾಡಿ, ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ನಮ್ಮ ತಂಡವೇ ಪ್ರಮುಖ ಪಾತ್ರ ವಹಿಸಿದೆ. ಈ ಸಂಬಂಧ ನ್ಯಾಯಾಲಯದಲ್ಲೂ ನಮ್ಮ ತಂಡವೇ ವಾದ ಮಂಡಿಸಿದೆ ಎಂದು ಹೇಳಿದರು.

ಸಮಾಜದಲ್ಲಿ ಉತ್ತಮ ಹೆಸರಿರುವ ವ್ಯಕ್ತಿಗಳನ್ನು ಅಭ್ಯರ್ಥಿಗಳಾಗಿ ಕಣಕ್ಕಿಳಿಸಲಾಗಿದೆ. ಸ್ವಚ್ಛ ಮತ್ತು ನ್ಯಾಯಸಮ್ಮತ ಆಡಳಿತ ನೀಡುವುದರ ಜೊತೆಗೆ ನ್ಯಾಸ ಪ್ರತಿಷ್ಠಾನದ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಸ್ಥೆಯನ್ನು ಮುಂದಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಟಿ.ಜಿ. ನಿತ್ಯಾನಂದ ಶೆಟ್ಟಿ, ಟಿ. ರಾಮಪ್ಪ, ಮ.ಸ. ನಂಜುಂಡಸ್ವಾಮಿ, ಆರ್. ಶ್ರೀನಿವಾಸ ಮೇಸ್ತ್ರಿ, ಶ್ರೀನಾಥ ಎನ್., ಧರ್ಮರಾಜ್ ಎನ್., ಪ್ರೇಮ್‌ಸಿಂಗ್, ವಕೀಲರು ಬಾಲಕೃಷ್ಣ, ವೈ.ವಿ. ಗೋಪಾಲಕೃಷ್ಣ, ಜಿ.ಕೆ. ಭೈರಪ್ಪ, ಎಂ.ಎಚ್. ನಾಗರಾಜ, ದಿನಕರ, ಶರಾವತಿ ಸಿ. ರಾವ್, ಕೊಟ್ರಪ್ಪ ಎಂ.ಎಸ್., ಸುದರ್ಶನ ಭಂಡಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪತ್ರಿಕಾಗೋಷ್ಠಿ ಬಳಿಕ ಸಮಿತಿಯ ಸದಸ್ಯರು ಚುನಾವಣಾ ಪ್ರಚಾರಕ್ಕೆ ತಂಡವಾಗಿ ಹೊರಟರು.

ಹಿಂದ್ ಸಮಾಚಾರ ಸುದ್ದಿ ಡೆಸ್ಕ್

ವರದಿ : ಮೇಘನ ಗಣೇಶ್

Leave a Reply

Your email address will not be published. Required fields are marked *