ಸಿರಿವಂತರು ಗ್ಯಾರಂಟಿ ಯೋಜನೆಗಳನ್ನು ಬಿಟ್ಟು ಕೊಡುವುದರಲ್ಲಿ ತಪ್ಪೇನಿದೆ: ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಶ್ನೆ

ಸಿರಿವಂತರು ಗ್ಯಾರಂಟಿ ಯೋಜನೆಗಳನ್ನು ಬಿಟ್ಟು ಕೊಡುವುದರಲ್ಲಿ ತಪ್ಪೇನಿದೆ: ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಶ್ನೆ

ಬೆಂಗಳೂರು, ಫೆ. 26:

ನನ್ನ ಹೇಳಿಕೆ ತಿರುಚಬೇಡಿ

ಉತ್ತಮ ಅಭಿವೃದ್ಧಿ ಯೋಜನೆಗಳನ್ನು ಘೋಷಿಸುತ್ತೇವೆ

21 ಕೋಟಿಯಷ್ಟು ಗ್ಯಾರಂಟಿ ಹಣ ಮೃತಪಟ್ಟವರ ಖಾತೆಗೆ ಹೋಗಿದೆ

“ಸಿರಿವಂತರು ಗ್ಯಾರಂಟಿ ಯೋಜನೆಗಳನ್ನು ಬಿಟ್ಟು ಕೊಡುವುದರಲ್ಲಿ ತಪ್ಪೇನಿದೆ. ಸರ್ಕಾರಿ ನೌಕರರು, ದೊಡ್ಡ, ದೊಡ್ಡ ಐಟಿ ಕಂಪೆನಿಗಳಲ್ಲಿ ಕೆಲಸ ಮಾಡುತ್ತಾ ಇರುವವರು – ಹೀಗೆ ಬಹಳ ಜನ ನಮಗೆ ಗ್ಯಾರಂಟಿ ಯೋಜನೆಗಳು ಬೇಡ ಎಂದಿದ್ದಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಗುರುವಾರದಂದು ಉತ್ತರಿಸಿದರು.

ಸಿರಿವಂತರು ಗ್ಯಾರಂಟಿ ಯೋಜನೆಗಳ ಫಲಾನುಭವದಿಂದ ಹೊರಬರಲಿ ಎಂದು ಒಂದಷ್ಟು ಸಚಿವರು ಹೇಳುತ್ತಿರುವ ಬಗ್ಗೆ ಕೇಳಿದಾಗ, “ಒಂದಷ್ಟು ಸಿರಿವಂತರು ನಮಗೆ ಅವಶ್ಯಕತೆ ಇಲ್ಲ ಎಂದಿದ್ದಾರೆ. 200 ಯೂನಿಟ್ ಉಚಿತ ವಿದ್ಯುತ್ ಬಗ್ಗೆಯೂ ಹೇಳಿದ್ದಾರೆ. ಅದಕ್ಕೆ ನಾವು ಆ ಬಗ್ಗೆ ವಿಮರ್ಶೆ ಮಾಡುತ್ತಿದ್ದೇವೆ” ಎಂದು ಹೇಳಿದರು.

“ಮಾಧ್ಯಮಗಳು ಯಾವುದನ್ನೂ ಸಹ ತಿರುಚುವುದು ಬೇಡ. ಯಾವ ಕಾರಣಕ್ಕೂ ಯಾವ ಗ್ಯಾರಂಟಿಗಳೂ ನಿಲ್ಲುವುದಿಲ್ಲ. ಎಷ್ಟೇ ಕಷ್ಟ ಇದ್ದರೂ ಸಹ ಗ್ಯಾರಂಟಿಗಳನ್ನು ಕೊಡುತ್ತಾ ಇದ್ದೇವೆ ಎಂದು ಹೇಳಿದ್ದೇನೆ. ಗ್ಯಾರಂಟಿಯಿಂದ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎನ್ನುವ ಸುಳ್ಳಿನ ಬಗ್ಗೆಯೂ ಸ್ಪಷ್ಟನೆ ನೀಡಿದ್ದೇನೆ. ಈ ಬಜೆಟ್ ನಲ್ಲಿ ಒಳ್ಳೊಳ್ಳೆ ಅಭಿವೃದ್ಧಿ ಕೆಲಸಗಳನ್ನು ನಮ್ಮ ಸರ್ಕಾರ ಘೋಷಣೆ ಮಾಡುತ್ತದೆ” ಎಂದು ಹೇಳಿದರು.

“ಕೇಂದ್ರ ಬಿಜೆಪಿ ಸರ್ಕಾರ ರಾಜ್ಯಕ್ಕೆ ಯಾವುದೇ ರೀತಿಯಲ್ಲೂ ಸಹಾಯ ಮಾಡುತ್ತಿಲ್ಲ ಆದರೂ ನಾವು ಗ್ಯಾರಂಟಿ ಯೋಜನೆಗಳನ್ನು ನೀಡಿ ನಿಭಾಯಿಸುತ್ತಿದ್ದೇವೆ. ಸರ್ಕಾರವೂ ಸಹ ಅತ್ಯುತ್ತಮವಾಗಿ ಆಡಳಿತ ನಡೆಸಿಕೊಂಡು ಹೋಗುತ್ತಿದೆ. 21 ಕೋಟಿಯಷ್ಟು ಹಣ ಮೃತಪಟ್ಟಿರುವ ಮಹಿಳೆಯರ ಖಾತೆಗೆ ಹೋಗಿದೆ. ಇದರ ಬಗ್ಗೆ ನಾವು ಚರ್ಚೆ ಮಾಡುತ್ತಿದ್ದೇವೆ” ಎಂದು ಹೇಳಿದರು.

ವರದಿ : ಮೇಘನ ಗಣೇಶ್

Leave a Reply

Your email address will not be published. Required fields are marked *