ಗೆದ್ದೆವು ಎಂದು ಕೂರುವಂತಿಲ್ಲ, ಲೋಕಸಭೆ ಚುನಾವಣೆಯಲ್ಲಿ 20 ಸ್ಥಾನಗಳನ್ನು ಗೆಲ್ಲಲೇಬೇಕು: ಶಾಸಕರಿಗೆ ಡಿಕೆಶಿ ಸೂಚನೆ

ನಂದಿನಿ ಮೈಸೂರು

ಗೆದ್ದೆವು ಎಂದು ಕೂರುವಂತಿಲ್ಲ, ಲೋಕಸಭೆ ಚುನಾವಣೆಯಲ್ಲಿ 20 ಸ್ಥಾನಗಳನ್ನು ಗೆಲ್ಲಲೇಬೇಕು: ಶಾಸಕರಿಗೆ ಡಿಕೆಶಿ ಸೂಚನೆ


ಬೆಂಗಳೂರು: ‘ವಿಧಾನಸಭೆ ಚುನಾವಣೆ ಗೆದ್ದೆವು ಎಂದು ಸುಮ್ಮನೆ ಕೂರುವಂತಿಲ್ಲ, ಲೋಕಸಭೆ ಚುನಾವಣೆಯಲ್ಲಿ ನಾವು 20 ಸ್ಥಾನಗಳನ್ನು ಗೆಲ್ಲಲೇಬೇಕು’ ಎಂದು ನೂತನ ಶಾಸಕರಿಗೆ ಡಿ.ಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಲೋಕಸಭೆ ಚುನಾವಣೆಯಲ್ಲೂ ಈ ಗೆಲುವಿನ ಯಾನ ಮುಂದುವರೆಯಬೇಕು.
ಬಿಬಿಎಂಪಿ ಚುನಾವಣೆಯಲ್ಲೂ ವಿಜಯ ಸಾಧಿಸಬೇಕು. ಜಿಲ್ಲಾ ಸಚಿವರು ಆಗುವವರು ಪ್ರತಿ ಜಿಲ್ಲೆಯಲ್ಲಿ ಹಾಗೂ ಶಾಸಕರು ಪ್ರತಿ ವಿಧಾನಸಭೆ ಕ್ಷೇತ್ರದಲ್ಲೂ ಪಕ್ಷದ ಕಚೇರಿ ಸ್ಥಾಪಿಸಲೇಬೇಕು. ಎಲ್ಲರಿಗೂ ಅಧಿಕಾರ ಸಿಗದಿರಬಹುದು. ಆದರೆ ನಿಮ್ಮ ಶ್ರಮಕ್ಕೆ ಗೌರವ ಸಿಗುತ್ತದೆ. ಪಕ್ಷದ ಕೆಲಸವನ್ನು ದೇವರ ಕೆಲಸ ಎಂದು ಮಾಡಬೇಕು’ ಎಂದು ಸಲಹೆ ನೀಡಿದ್ದಾರೆ.
‘ಚುನಾವಣೆಯಲ್ಲಿ ನಿಮ್ಮ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರನ್ನು ಮರೆಯಬಾರದು. ರಾಜ್ಯದ ಜನರಿಗೆ ಸ್ವಚ್ಛ ಆಡಳಿತ ನೀಡಲು ಸಹಕರಿಸಬೇಕು. ಮೈಯೆಲ್ಲಾ ಕಣ್ಣಾಗಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು’ ಎಂದು ಅವರು ತಿಳಿಸಿದ್ದಾರೆ.
‘ಅಧಿಕಾರ ಕೊಟ್ಟಿರುವ ಜನರಿಗೆ ನೀವು ಸರಿಯಾಗಿ ಸ್ಪಂದಿಸುವುದು ಹಾಗೂ ಉತ್ತಮ ಆಡಳಿತ ನೀಡುವುದು ನಮ್ಮ ಪ್ರಥಮ ಆದ್ಯತೆಯಾಗಿದೆ. ಶಾಸಕರು ಜನರ ಮನಸ್ಸು ಗೆಲ್ಲಬೇಕು, ಲೋಕಸಭೆ ಚುನಾವಣೆ ಪ್ರಮುಖವಾಗಿದ್ದು, ದ್ವೇಷ ಅಸೂಯೆ ಎಲ್ಲವನ್ನೂ ಮರೆತು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದ್ದಾರೆ.

Leave a Reply

Your email address will not be published. Required fields are marked *