ಶಿವಮೊಗ್ಗದಲ್ಲಿ ಮಾ. 14 ರಂದು ಬಂಗಾರಪ್ಪ ರಸ್ತೆ ನಾಮಫಲಕ ಅನಾವರಣ

ಶಿವಮೊಗ್ಗದಲ್ಲಿ ಮಾ. 14 ರಂದು ಬಂಗಾರಪ್ಪ ರಸ್ತೆ ನಾಮಫಲಕ ಅನಾವರಣ

ಹಿಂದ್ ಸಮಾಚಾರ್ ಸುದ್ದಿ ವಿಭಾಗ, ಶಿವಮೊಗ್ಗ | ಮಾರ್ಚ್ 13, 2026

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಹೆಸರನ್ನು ನಗರದ ಪ್ರಮುಖ ರಸ್ತೆಗೆ ನಾಮಕರಣ ಮಾಡುವ ಕಾರ್ಯಕ್ರಮ ಮಾರ್ಚ್ 14ರಂದು ನಡೆಯಲಿದೆ.
ನಗರದ ಆಲ್ಕೊಳ ವೃತ್ತದಿಂದ ಗೋಪಾಲಗೌಡ ಬಡಾವಣೆಯ ಡಿವಿಜಿ ವೃತ್ತದವರೆಗೆ ಇರುವ ನೂರು ಅಡಿ ಅಗಲದ ದ್ವಿಪಥ ರಸ್ತೆಗೆ ಎಸ್. ಬಂಗಾರಪ್ಪ ಅವರ ಹೆಸರನ್ನು ಇಡುವ ಕುರಿತು ಕರ್ನಾಟಕ ಸರ್ಕಾರ ಈಗಾಗಲೇ ಅಧಿಸೂಚನೆ ಹೊರಡಿಸಿದೆ. ಇದರ ಅಂಗವಾಗಿ ಗೋಪಾಲಗೌಡ ಬಡಾವಣೆಯಲ್ಲಿ ಮಾರ್ಚ್ 14ರಂದು ಬೆಳಿಗ್ಗೆ 11.30ಕ್ಕೆ ನಾಮಫಲಕ ಅನಾವರಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಬಡವರ ಪರವಾಗಿ ಕೆಲಸ ಮಾಡಿದ ಜನಪರ ನಾಯಕನಾಗಿ ಗುರುತಿಸಿಕೊಂಡಿದ್ದ ಎಸ್. ಬಂಗಾರಪ್ಪ ತಮ್ಮ ಆಡಳಿತಾವಧಿಯಲ್ಲಿ ಆಶ್ರಯ ಮನೆ ಯೋಜನೆ, ರೈತರಿಗೆ ಉಚಿತ ವಿದ್ಯುತ್ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು. ಶಿವಮೊಗ್ಗ ಜಿಲ್ಲೆಯಲ್ಲಿ ಬಗರ್ ಹುಕುಂ ಹೋರಾಟಗಾರರ ಪರವಾಗಿ ಕಾರ್ಯನಿರ್ವಹಿಸಿ ಸಾವಿರಾರು ಕುಟುಂಬಗಳಿಗೆ ಭೂಮಿ ಹಕ್ಕುಪತ್ರ ದೊರಕುವಂತೆ ಮಾಡಿದವರು ಎಂದು ಹೇಳಲಾಗುತ್ತದೆ.

ಇದಲ್ಲದೆ ಮಲೆನಾಡು ಮತ್ತು ಮಧ್ಯ ಕರ್ನಾಟಕದ ಪ್ರಮುಖ ವೈದ್ಯಕೀಯ ಕೇಂದ್ರವಾಗಿರುವ ಮೆಗನ್ ಆಸ್ಪತ್ರೆಯ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಮಹತ್ವದ್ದಾಗಿದೆ. ತುಂಗಾ ಏತ ನೀರಾವರಿ ಹಾಗೂ ತುಂಗಾ ಮೇಲ್ದಂಡೆ ಯೋಜನೆಗಳಿಗೆ ಅವರ ಆಡಳಿತದಲ್ಲಿಯೇ ಅಡಿಗಲ್ಲು ಹಾಕಲಾಗಿತ್ತು. ಶಿವಮೊಗ್ಗ ನಗರಕ್ಕೆ ಕುಡಿಯುವ ನೀರನ್ನು ಗಜನೂರು ಅಣೆಕಟ್ಟಿನಿಂದ ತರಲು ಸಹ ಅವರು ಪ್ರಮುಖ ಪಾತ್ರವಹಿಸಿದ್ದರು.
ನಾಮಫಲಕ ಅನಾವರಣ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸೇರಿದಂತೆ ಶಾಸಕರು, ಸಂಸದರು ಮತ್ತು ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಮಹಾನಗರ ಪಾಲಿಕೆ ಹಾಗೂ ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಬಂಗಾರಪ್ಪ ಅವರ ಅಭಿಮಾನಿಗಳು ಮತ್ತು ಬೆಂಬಲಿಗರು ಸ್ವಾಗತಿಸಿ ಅಭಿನಂದನೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *