ಮೈಸೂರು: ಮೈಸೂರಿನಲ್ಲಿ ಅರಣ್ಯ ಇಲಾಖೆ ನಡೆಸುತ್ತಿರುವ ಪ್ಲಾಸ್ಟಿಕ್ ಮುಕ್ತ.
ಚಾಮುಂಡಿಬೆಟ್ಟ ಅಭಿಯಾನದಲ್ಲಿ ಪರಿಸರ ಬಳಗ ಮತ್ತು ಚಾಮುಂಡಿಬೆಟ್ಟ ಉಳಿಸಿ ಸಮಿತಿಯ ಸದಸ್ಯರು ಭಾಗವಹಿಸಿದ್ರು. ಅರಣ್ಯ ಇಲಾಖೆ ಸಿಬ್ಬಂದಿ ಜೊತೆಗೆ ಪರಿಸರ ಬಳಗ ಮತ್ತು ಚಾಮುಂಡಿಬೆಟ್ಟ ಉಳಿಸಿ ಸಮಿತಿ ಸದಸ್ಯರು ತಾವರೆಕಟ್ಟೆಯಿಂದ ಸ್ವಚ್ಛತಾ ಕಾರ್ಯ ಪ್ರಾರಂಭಿಸಿ, ರಸ್ತೆಯ ಎರಡೂ ಬದಿಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಮದ್ಯದ ಖಾಲಿ ಬಾಟಲಿಗಳನ್ನು ಸಂಗ್ರಹಿಸಿದರು. ಹಲವು ಮೂಟೆ ಪ್ಲಾಸ್ಟಿಕ್ ತ್ಯಾಜ್ಯ, ನೂರಾರು ಖಾಲಿ ಬಾಟಲಿಗಳನ್ನ ಸಂಗ್ರಹಿಸಿ ಸೂಕ್ತ ವಿಲೇವಾರಿಗೆ ಅರಣ್ಯ ಇಲಾಖೆ ಸಿಬ್ಬಂದಿಗೆ ಕೊಡಲಾಯಿತು. ಪರಿಸರದ ಕಾಳಜಿ ಮತ್ತು ನಾಡಿನ ಅಧಿದೇವತೆ ಚಾಮುಂಡೇಶ್ವರಿ ಬಗ್ಗೆ ಭಕ್ತಿ ಇದ್ದರೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಮತ್ತು ಖಾಲಿ ಗಾಜಿನ ಶೀಶೆಗಳನ್ನು ಚಾಮುಂಡಿ ಬೆಟ್ಟಕ್ಕೆ ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ಬಿಸಾಡಬಾರದೆಂದು ಪರಿಸರ ಬಳಗ ಮತ್ತು ಚಾಮುಂಡಿ ಬೆಟ್ಟ ಉಳಿಸಿ ಸಮಿತಿ ಸದಸ್ಯರು ಮನವಿ ಮಾಡಿದ್ರು. ಈ ಅಭಿಯಾನದಲ್ಲಿ ವಲಯ ಅರಣ್ಯಾಧಿಕಾರಿ ಎಂ.ಆರ್.ಧನ್ಯಶ್ರೀ, ಪರಿಸರ ಬಳಗ ಮತ್ತು ಚಾಮುಂಡಿ ಬೆಟ್ಟ ಉಳಿಸಿ ಸಮಿತಿ ಸಂಸ್ಥಾಪಕ ಸದಸ್ಯ ಪರಶುರಾಮೇಗೌಡ, ಲೀಲಾ ಶಿವಕುಮಾರ್, ಪ್ರಮೀಳಾ ರವೀಂದ್ರ, ಕುಸುಮ ಆಯರಹಳ್ಳಿ, ಸಮರ್ಥ, ಅಶ್ವಥ್ ಸೇರಿ ಹಲವರು ಪಾಲ್ಗೊಂಡಿದ್ದರು.


