ಮೈಸೂರು : ವಿದ್ಯಾರ್ಥಿಗಳು ಸಾಧಿಸುವ ಮನೋಭಾವ ಬೆಳೆಸಿಕೊಳ್ಳಿ : ರಾಮದಾಸ್.

ವಿದ್ಯಾರ್ಥಿಗಳು ಸಾಧಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶಾಸಕ ಎಸ್.ಎ. ರಾಮದಾಸ್ ತಿಳಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಆಶ್ರಯದಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಎಸ್ಎಸ್ಎಲ್ಸಿ ಫಲಿತಾಂಶ ಉತ್ತಮೀಕರಣಕ್ಕಾಗಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉಳ್ಳವರ ಮಕ್ಕಳ ಸಾಧನೆ ಮೆಚ್ಚುಗೆ ಅಲ್ಲ, ಇಲ್ಲದವರ ಮಕ್ಕಳ ಸಾಧನೆ ಮೆಚ್ಚುಗೆಗೆ ಅರ್ಹವಾಗಲಿದೆ. ನೀವೆಲ್ಲ ಸರ್ಕಾರಿ ಶಾಲೆಯನ್ನು ಆಯ್ಕೆ ಮಾಡಿಕೊಂಡಿರುವುದರ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳಬೇಕು. ಓದಿನತ್ತ ಗಮನ ಕೇಂದ್ರೀಕರಿಸಬೇಕು ಎಂದು ಸಲಹೆ ನೀಡಿದರು.
ಕಳೆದ ಸಾಲಿನಲ್ಲಿ ಸರ್ಕಾರಿ ಶಾಲೆಯಲ್ಲಿನ ವಿದ್ಯಾರ್ಥಿನಿಯೊಬ್ಬರು ಮೊದಲ ಸ್ಥಾನದಲ್ಲಿ ತೇರ್ಗಡೆಯಾದರು. ಅವರ ಕುಟುಂಬಕ್ಕೆ ಸ್ವಂತ ಮನೆ ಇರಲಿಲ್ಲ. ಆ ಕಾರಣಕ್ಕಾಗಿ ಆ ವಿದ್ಯಾರ್ಥಿಗೆ ಮನೆ ನೀಡಲಾಯಿತು. ಮಾತ್ರವಲ್ಲ, ಈ ಫೆಬ್ರವರಿ ತಿಂಗಳ ಅಂತ್ಯಕ್ಕೆ ಲಲಿತಮಹಲ್ ಹಿಂಭಾಗ ಗುಂಪು ಮನೆ ನಿರ್ಮಾಣ ಕಾರ್ಯ ನಡೆಯಲಿದ್ದು, ಅದರ ಭೂಮಿಪೂಜೆಯನ್ನು ಆಕೆಯೇ ನೆರವೇರಿಸಲಿದ್ದಾಳೆ. ಆಕೆ ನಮ್ಮೆದುರಿಗಿನ ಮಾದರಿ ವಿದ್ಯಾರ್ಥಿನಿ ಎಂದು ಬಣ್ಣಿಸಿದರು.
ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಮಕ್ಕಳಿಗೆ ಹೆಚ್ಚಿನ ಕಿಚ್ಚು ಇರುತ್ತದೆ. ಹೆಚ್ಚಿನ ಸಾಧಕರೂ ಅವರೇ ಆಗಿದ್ದಾರೆ. ಹಾಗಾಗಿ ನೀವೆಲ್ಲರೂ ಈ ಸಾಲಿನಲ್ಲಿ ಶೇ.೧೦೦ ಫಲಿತಾಂಶ ತರಬೇಕು. ಸಾಧಿಸುವ ಮನೋಭಾವ ಇದ್ದಲ್ಲಿ ಯಾವುದೂ ಅಸಾಧ್ಯವಲ್ಲ ಎಂಬ ಮಂತ್ರ ನಿಮ್ಮದಾಗಬೇಕು. ನಿಮ್ಮ ಜೀವನ ಶೈಲಿ ಬದಲಾಗಬೇಕು. ನೀವು ಸೂರ್ಯವಂಶಸ್ಥರಾಗಬಾರದು. ಬದಲಾಗಿ ಮುಂಜಾನೆ ಐದು ಗಂಟೆ ಎದ್ದು ಓದಬೇಕು. ಇದಕ್ಕೆ ಪೂರಕವಾಗಿ ಪೋಷಕರು ಮುಂದಿನ ಎರಡು ತಿಂಗಳ ಕಾಲ ಟಿವಿಯನ್ನು ನಿಲ್ಲಿಸಿ, ಮನೆಯ ಮಕ್ಕಳ ಓದಿನ ಸ್ಥಳದಲ್ಲಿ ತಾವೂ ಕೂರಬೇಕು, ಈ ಮೂಲಕ ಅವರಿಗೆ ಪ್ರೇರಣೆ ತುಂಬಬೇಕು ಎಂದು ಹೇಳಿದರು.
ಸಣ್ಣ ಸಣ್ಣ ವಿಚಾರಗಳು ಕೂಡ ಮಕ್ಕಳ ಭವಿಷ್ಯದ ಮೇಲೆ ದೊಡ್ಡ ಪ್ರಮಾಣದ ಪರಿಣಾಮ ಬೀರುತ್ತದೆ ಎಂಬ ವಿಷಯ ಪೋಷಕರಿಗೆ ತಿಳಿಯಬೇಕು. ಹಾಗೆ ಮಾಡಿದರೆ ಮಾತ್ರ ನಿರೀಕ್ಷೆಗೂ ಮೀರಿದ ಫಲಿತಾಂಶ ಬರಲು ಸಾಧ್ಯ ಎಂದರು.
ನಮ್ಮ ಕ್ಷೇತ್ರದ ಶಾಲೆಗಳಲ್ಲಿ ಎಸ್ಎಸ್ಎಲ್ಸಿಯಲ್ಲಿ ಈವರೆಗೆ ಶೇ.೯೩ ಫಲಿತಾಂಶ ಬಂದಿದೆ. ಅದು ಶೇ.೧೦೦ ಆಗಬೇಕು. ಅದನ್ನು ಸಾಧಿಸಬೇಕಾದ ಹೊಣೆ ನಿಮ್ಮಗಳ ಮೇಲಿದೆ ಎಂದ ಅವರು, ಈ ಬಾರಿ ಎಲ್ಲಾ ಶಾಲೆಗಳು ಶೇ.೧೦೦ ಫಲಿತಾಂಶ ಪಡೆಯುವ ಸಂಕಲ್ಪ ಮಾಡಬೇಕು. ಅದಕ್ಕೆ ಪೂರಕವಾದ ನೆರವನ್ನು ನಾವು ನೀಡಲಿದ್ದೇವೆ ಎಂದು ಭರವಸೆ ನೀಡಿದರು.
ಈ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳನ್ನು ಅರಮನೆಯಲ್ಲಿ ಅಭಿನಂದಿಸಲಾಗುವುದು. ಮಾತ್ರವಲ್ಲ, ಬಾಡಿಗೆ ಮನೆಯಲ್ಲಿರುವ ಮಕ್ಕಳಿಗೆ ಮನೆ ನೀಡಲಾಗುವುದು ಎಂದು ಘೋಷಿಸಿದರು.
ಈ ಕಾರ್ಯಕ್ರಮದಲ್ಲಿ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್ .ರಾಮಾರಾಧ್ಯ, ಪಾಲಿಕೆ ಸದಸ್ಯೆ ಛಾಯಾದೇವಿ, ಬಿ.ಆರ್.ಸಿ ಶ್ರೀಕಂಠ ಸ್ವಾಮಿ,ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶ್ರೀಕಂಠ ಶಾಸ್ತ್ರಿ, ಎಸ್.ಡಿ.ಎಂ.ಸಿ ಅದ್ಯಕ್ಷ ಶ್ರೀನಿವಾಸ, ಶಿ.ಸಂ..ಮನೋಹರ್ ಹಾಗೂ ಎಲ್ಲಾ ಅನುಪಾಲನಾಧಿಕಾರಿಗಳು ಭಾಗವಹಿಸಿದ್ದರು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

