ಸಂವಿಧಾನದ ಪ್ರತಿ ಹಿಡಿದು, ವೀರ ಗಂಗಾಧರ ಅಜ್ಜಯ್ಯ ಹೆಸರಲ್ಲಿ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ
ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಭಾರತದ ಸಂವಿಧಾನ ಪ್ರತಿ ಹಿಡಿದು ವೀರ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು.

ಲೋಕಭವನದ ಗಾಜಿನ ಮನೆಯಲ್ಲಿ ಬುಧವಾರ ನಡೆದ ಸರಳ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರಚಂದ್ ಗೆಹಲೋಟ್ ಅವರು ಬೋಧಿಸಿದ ಗೌಪ್ಯತಾ ಪ್ರಮಾಣ ವಚನವನ್ನು ಶಿವಕುಮಾರ್ ಅವರು ಬುಧವಾರ ಸ್ವೀಕರಿಸಿದರು.
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾದ ಸಿದ್ದರಾಮಯ್ಯ, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಕೇರಳಂ ಸಿಎಂ ವಿ.ಡಿ. ಸತೀಶನ್, ಹಿಮಾಚಲ ಪ್ರದೇಶ ಸಿಎಂ ಸುಖ್ವಿಂದರ್ ಸಿಗ್ ಸುಖು, ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಅವರು ಉಪಸ್ಥಿತರಿದ್ದರು.
ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸುವ ಮುನ್ನ, ವೀರ ಗಂಗಾಧರಯ್ಯ ಅಜ್ಜಯ್ಯನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ನೆರೆದಿದ್ದ ಸಭಿಕರಿಗೆ ಅಡ್ಡಬಿದ್ದು ಸಾಷ್ಟಾಂಗ ನಮಸ್ಕಾರ ಅರ್ಪಿಸಿದರು. ಸಿಎಂ ಡಿ.ಕೆ. ಶಿವಕುಮಾರ್ ಅವರ ಜೊತೆಗೆ ಅವರ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿ ಡಾ.ಜಿ. ಪರಮೇಶ್ವರ್ ಅವರು, ಸಚಿವರಾಗಿ ಕೆ.ಎಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಎಂ.ಬಿ ಪಾಟೀಲ್, ರಾಮಲಿಂಗಾ ರೆಡ್ಡಿ, ಸತೀಶ್ ಜಾರಕಿಹೊಳಿ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಯು.ಟಿ ಖಾದರ್, ಈಶ್ವರ್ ಖಂಡ್ರೆ, ಯತೀಂದ್ರ ಸಿದ್ದರಾಮಯ್ಯ, ಬೈರತಿ ಸುರೇಶ್, ಶರಣಪ್ರಕಾಶ್ ಪಾಟೀಲ್ ಅವರು ಪ್ರಮಾಣವಚನ ಸ್ವೀಕರಿಸಿದರು.



