ಮುಂಬೈ ಕರಾವಳಿಯ ಬಳಿ ಅಂತರರಾಷ್ಟ್ರೀಯ ತೈಲ ಕಳ್ಳಸಾಗಣೆ ಜಾಲವನ್ನು ಐಸಿಜಿ ಪತ್ತೆಹಚ್ಚಿತು
ಮುಂಬೈ: ಭಾರತೀಯ ಕರಾವಳಿ ಪಡೆ (ಐಸಿಜಿ) ಸಮುದ್ರ–ವಿಮಾನ ಜಾಲ ಆಧಾರಿತ ಮಹತ್ವದ ಕಾರ್ಯಾಚರಣೆಯ ಮೂಲಕ ಅಂತರರಾಷ್ಟ್ರೀಯ ತೈಲ ಕಳ್ಳಸಾಗಣೆ ಜಾಲವನ್ನು ಪತ್ತೆಹಚ್ಚಿದ್ದು, ಸಂಘರ್ಷ ಪೀಡಿತ ಪ್ರದೇಶಗಳಿಂದ ಅಕ್ರಮವಾಗಿ ತೈಲ ಮತ್ತು ತೈಲ ಆಧಾರಿತ ಸರಕುಗಳನ್ನು ಸಾಗಿಸಲು ಬಳಸಲಾಗುತ್ತಿದ್ದ ಅತ್ಯಂತ ಸುಸಂಘಟಿತ ವಿಧಾನವನ್ನು ಬಹಿರಂಗಪಡಿಸಿದೆ.
ಅಧಿಕೃತ ಮೂಲಗಳ ಪ್ರಕಾರ, ಈ ತಿಂಗಳ 5ರಂದು ಮುಂಬೈಗೆ ಪಶ್ಚಿಮದಾಗಿ ಸುಮಾರು 100 ನಾಟಿಕಲ್ ಮೈಲು ದೂರದಲ್ಲಿ ಮೂರು ಅನುಮಾನಾಸ್ಪದ ಹಡಗುಗಳನ್ನು ತಡೆದ ನಂತರ ಕಾರ್ಯಾಚರಣೆ ಆರಂಭಿಸಲಾಯಿತು. ನಿನ್ನೆ ಈ ಸಂಯೋಜಿತ ಕಾರ್ಯಾಚರಣೆ ಅಂತ್ಯಗೊಂಡಿದ್ದು, ಸಂಪೂರ್ಣ ಕಳ್ಳಸಾಗಣೆ ಜಾಲವನ್ನು ಐಸಿಜಿ ಪತ್ತೆಹಚ್ಚಿದೆ.
ತನಿಖೆಯಲ್ಲಿ, ಕಡಿಮೆ ಬೆಲೆಯ ತೈಲ ಮತ್ತು ತೈಲ ಆಧಾರಿತ ಸರಕುಗಳನ್ನು ಅಂತರರಾಷ್ಟ್ರೀಯ ನೀರಿನಲ್ಲಿ ಮೋಟಾರ್ ಟ್ಯಾಂಕರ್‌ಗಳಿಗೆ ಮಧ್ಯಸಮುದ್ರ ವರ್ಗಾವಣೆಯ ಮೂಲಕ ಸಾಗಿಸಲಾಗುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ. ಈ ಗುಪ್ತ ವರ್ಗಾವಣೆಗಳು ಸರಕುಗಳ ಮೂಲವನ್ನು ಮರೆಮಾಚಿ ಜಾಗತಿಕ ಮಾರುಕಟ್ಟೆಗಳಲ್ಲಿ ಅಕ್ರಮ ಲಾಭ ಗಳಿಸುವ ಉದ್ದೇಶ ಹೊಂದಿದ್ದವು.
ಹಡಗುಗಳ ಸುದೀರ್ಘ ಪರಿಶೀಲನೆ, ದಾಖಲೆಗಳ ಪರಿಶೀಲನೆ, ಎಲೆಕ್ಟ್ರಾನಿಕ್ ಡೇಟಾ ವಿಶ್ಲೇಷಣೆ ಮತ್ತು ಸಿಬ್ಬಂದಿಯ ಸವಿಸ್ತಾರ ವಿಚಾರಣೆಯ ಮೂಲಕ ಐಸಿಜಿ ಸಂಪೂರ್ಣ ಕಾರ್ಯಾಚರಣಾ ಸರಪಳಿಯನ್ನು ಸ್ಥಾಪಿಸಿತು. ಇದರಿಂದ ಈ ಜಾಲದ ಅಂತರರಾಷ್ಟ್ರೀಯ ಸ್ವರೂಪವನ್ನು ದೃಢಪಡಿಸಲು ಸಾಧ್ಯವಾಯಿತು.
ಈ ಯಶಸ್ವಿ ಕಾರ್ಯಾಚರಣೆ ಭಾರತೀಯ ಕರಾವಳಿ ಪಡೆಯ ಹೆಚ್ಚಿದ ನಿಗಾವ್ಯವಸ್ಥೆ ಮತ್ತು ಭಾರತದ ಸಾಗರ ಹಿತಾಸಕ್ತಿಗಳನ್ನು ರಕ್ಷಿಸುವುದರ ಮೇಲಿನ ಬದ್ಧತೆಯನ್ನು ಸ್ಪಷ್ಟಪಡಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮುಂದಿನ ತನಿಖೆಗಳು ಮುಂದುವರಿದಿದ್ದು, ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

