ಶಿವಮೊಗ್ಗದಲ್ಲಿ ನಡೆದ ರಸ್ತೆ ಅಪಘಾತ: ಗಾಯಗೊಂಡ ಕೇರಳದ ವಿದ್ಯಾರ್ಥಿನಿಗೆ ಮಲಯಾಳಿ ಸಮಾಜದ ನೆರವು
ಶಿವಮೊಗ್ಗ: ಶಿವಮೊಗ್ಗದ ಸಾವಳಂಗ ರಸ್ತೆ ಬಳಿ ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಗಾಯಗೊಂಡ ಘಟನೆ ಇತ್ತೀಚೆಗೆ ನಡೆದಿದೆ. ಗಾಯಗೊಂಡವರಲ್ಲಿ ಶಿವಮೊಗ್ಗದ ಸುಬ್ಬಯ್ಯ ನರ್ಸಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಎಸ್.ಸಿ. ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಕೇರಳ ಮೂಲದ ಇಬ್ಬರು ವಿದ್ಯಾರ್ಥಿನಿಯರು ಸೇರಿದ್ದಾರೆ.
ಅವರಲ್ಲಿ ಒಬ್ಬರಾದ ರೆಬೆಕ್ಕಾ ಅವರಿಗೆ ತೀವ್ರ ತಲೆಗೆ ಗಾಯವಾಗಿದ್ದು, ಎಂಟು ಹೊಲಿಗೆಗಳು ಹಾಕಲಾಗಿದೆ. ಜೊತೆಗೆ ಬೆನ್ನೆಲುಬಿಗೆ ಪೆಟ್ಟು ಬಿದ್ದಿದೆ. ಹೆಚ್ಚಿನ ಚಿಕಿತ್ಸೆಗೆ ಅವರನ್ನು ಕೇರಳದ ಕಾಲಿಕಟ್ ಮೆಡಿಕಲ್ ಕಾಲೇಜಿಗೆ ಸ್ಥಳಾಂತರಿಸುವಂತೆ ವೈದ್ಯರು ಸಲಹೆ ನೀಡಿದರು.
ಆದರೆ ರೆಬೆಕ್ಕಾರ ತಂದೆ ಇಲ್ಲದಿರುವುದರಿಂದ ಹಾಗೂ ಆರ್ಥಿಕ ಸಮಸ್ಯೆಗಳ ಕಾರಣದಿಂದ ಕುಟುಂಬ ಸಂಕಷ್ಟದಲ್ಲಿತ್ತು. ಈ ಸಂದರ್ಭದಲ್ಲಿ ಅವರು ಶಿವಮೊಗ್ಗದ ಮಲಯಾಳಿ ಸಮಾಜದ ಪ್ರಮುಖರನ್ನು ಸಂಪರ್ಕಿಸಿದರು.
ಮಲಯಾಳಿ ಸಮಾಜದ ನಾಯಕರುಗಳಾದ ಜಿ. ರಾಮಚಂದ್ರ ಪಿಳ್ಳೈ, ಎಸ್. ತಂಕಪ್ಪನ್, ನೌಶಾದ್ ಹಾಗೂ ಮಲಯಾಳಿ ಸಮಾಜದ ಅಧ್ಯಕ್ಷರಾದ ಸತೀಶ್ ಎನ್.ಡಿ. ಅವರು ಆಸ್ಪತ್ರೆಗೆ ಭೇಟಿ ನೀಡಿ, ಮಲಯಾಳಿ ಸಮಾಜದ ವತಿಯಿಂದ ಉಚಿತ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದರು.
ರೆಬೆಕ್ಕಾ ಮತ್ತು ಅವರ ತಾಯಿ ನಿಷಾ ಅವರನ್ನು ಶಿವಮೊಗ್ಗದಿಂದ ಕಾಲಿಕಟ್ ಮೆಡಿಕಲ್ ಕಾಲೇಜಿಗೆ ಆಂಬ್ಯುಲೆನ್ಸ್ ಮೂಲಕ ಸುರಕ್ಷಿತವಾಗಿ ಕಳುಹಿಸಲಾಯಿತು. ಅವರು ಇಂದು ಕಾಲಿಕಟ್ ತಲುಪಿ, ಅಲ್ಲಿ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿದ್ದಾರೆ.
ಕಾಲಿಕಟ್ ಮೆಡಿಕಲ್ ಕಾಲೇಜಿಗೆ ತಲುಪಿದ ನಂತರ ರೆಬೆಕ್ಕಾ ಅವರು ಶಿವಮೊಗ್ಗದ ಮಲಯಾಳಿ ಸಮಾಜಕ್ಕೆ ತಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.
ಸಮಾಜಸೇವೆಯ ಮೂಲಕ ಮಾನವೀಯತೆ ಮೆರೆದ ಮಲಯಾಳಿ ಸಮಾಜದ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.


