ಸಾಗರದಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಮಾರಿಕಾಂಬಾ ದೇವಿಯ ಜಾತ್ರೆಗೆ ಅದ್ದೂರಿ ಚಾಲನೆ
ಭಕ್ತಿಯಿಂದ, ಸಂಭ್ರಮದಿಂದ ಕಂಗೊಳಿಸಿದ ಶಕ್ತಿ ಆರಾಧನೆಯ ಮಹೋತ್ಸವ
ಸಾಗರ : ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ, ಕರ್ನಾಟಕದ ಅತಿದೊಡ್ಡ ಜಾತ್ರೆಗಳಲ್ಲಿ ಎರಡನೇ ಸ್ಥಾನ ಪಡೆದಿರುವ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಫೆಬ್ರವರಿ 3ರಿಂದ ಭಕ್ತಿಭಾವ ಮತ್ತು ವೈಭವದೊಂದಿಗೆ ಆರಂಭಗೊಂಡಿದೆ. ಜಾತಿ–ಮತ ಭೇದವಿಲ್ಲದೆ ಊರಿಗೆ ಊರೇ ಒಂದಾಗಿ ಸಂಭ್ರಮಿಸುವ ಈ ಜಾತ್ರೆ, ಸಾಗರದ ಆದಿದೇವತೆ ಶಕ್ತಿ ದೇವಿಯ ಮಹಿಮೆಯನ್ನು ಮತ್ತೊಮ್ಮೆ ಸ್ಮರಿಸಿಸಿದೆ.
ಮಂಗಳವಾರ ರಾತ್ರಿ ತವರು ಮನೆಯ ದೇವಸ್ಥಾನದಿಂದ ಗಂಡನ ಮನೆಯ ದೇವಸ್ಥಾನಕ್ಕೆ ಮಾರಿಕಾಂಬಾ ದೇವಿಯ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯು ಸಾಗರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗುತ್ತಿದ್ದಂತೆ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು. ಸಾಗರವೇ ಭಕ್ತಸಾಗರವಾಗಿ ಪರಿವರ್ತನೆಯಾದ ದೃಶ್ಯ ಕಂಡುಬಂತು.
ತವರು ಮನೆ ದೇವಸ್ಥಾನದಲ್ಲಿ ಒಂದು ದಿನ ಮಾತ್ರ ಆಚರಣೆ ನಡೆದರೆ, ಜಾತ್ರೆಯ ಪ್ರಮುಖ ಆಕರ್ಷಣೆಯಾದ ಗಂಡನ ಮನೆ ದೇವಸ್ಥಾನದ ಗೋಪುರದ ಎದುರು ವಿಶೇಷವಾಗಿ ರಾಜಸ್ಥಾನ–ಜೋಧ್ಪುರ ಶೈಲಿಯಲ್ಲಿ ನಿರ್ಮಿಸಿರುವ ಭವ್ಯ ಮಂಟಪ ಎಲ್ಲರ ಗಮನ ಸೆಳೆದಿದೆ. ರಾಜರ ದರ್ಬಾರ್ ಅನ್ನು ನೆನಪಿಸುವ ಈ ಪೆಂಡಾಲ್ನಲ್ಲಿ ಮುಂದಿನ ಎಂಟು ದಿನಗಳ ಕಾಲ ವಿಶೇಷ ಪೂಜೆಗಳು ನಡೆಯಲಿದ್ದು, ಅಮ್ಮ ಗದ್ದುಗೆ ಏರಿ ಭಕ್ತರ ಆರಾಧನೆ ಸ್ವೀಕರಿಸಲಿದ್ದಾಳೆ.
ಜನಪದೀಯ ಹಿನ್ನಲೆಯ ಅಪರೂಪದ ಧಾರ್ಮಿಕ ಆಚರಣೆಗಳು, ಊರಿಗೆ ಊರೇ ಮಾಡಿದ ಸಿಂಗಾರ, ಸಂಭ್ರಮದ ವಾತಾವರಣ ಜಾತ್ರೆಗೆ ಇನ್ನಷ್ಟು ಕಳೆ ನೀಡಿದೆ. ಮೂಲತಃ ಸಾಗರದವರಾಗಿದ್ದು, ಪ್ರಸ್ತುತ ಬೇರೆಡೆ ನೆಲೆಸಿರುವ ಹೆಣ್ಣುಮಕ್ಕಳು ಜಾತ್ರೆ ಸಂದರ್ಭದಲ್ಲಿ ತಪ್ಪದೇ ತವರು ಮನೆಗೆ ಆಗಮಿಸಿ ದೇವಿಗೆ ಉಡಿ ತುಂಬುವ ಶಾಸ್ತ್ರದಲ್ಲಿ ಪಾಲ್ಗೊಂಡು ಸತ್ಕಾರ ಸ್ವೀಕರಿಸುವುದು ಈ ಜಾತ್ರೆಯ ವಿಶೇಷತೆ.
ಗಂಡನ ಮನೆಯ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಂಡಿರುವ ಶ್ರೀ ಮಾರಿಕಾಂಬಾ ದೇವಿಯ ದರ್ಶನ ಪಡೆಯಲು ತಾಲೂಕು, ಹೋಬಳಿ, ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದು, ಸಾಗರ ಪಟ್ಟಣ ಧಾರ್ಮಿಕ ಶ್ರದ್ಧೆ ಮತ್ತು ಸಂಭ್ರಮದ ಕೇಂದ್ರವಾಗಿ ಕಂಗೊಳಿಸುತ್ತಿದೆ.


