ಶ್ರೀ ಮಾರಿಕಾಂಬಾ ಜಾತ್ರೆಯಲ್ಲಿ ಅಪಚಾರವಾಗದಿರಲಿ ಭಕ್ತಾದಿಗಳ ಕಳಕಳಿ ವಿನಂತಿ – ಜಗದೀಶ್ ಭಟ್ ಸಾಗರ

ಶ್ರೀ ಮಾರಿಕಾಂಬಾ ಜಾತ್ರೆಯಲ್ಲಿ ಅಪಚಾರವಾಗದಿರಲಿ ಭಕ್ತಾದಿಗಳ ಕಳಕಳಿ ವಿನಂತಿ – ಜಗದೀಶ್ ಭಟ್ ಸಾಗರ

ಸಾಗರ: ಶ್ರೀ ಕ್ಷೇತ್ರ ಸಾಗರದ ಆರಾಧ್ಯ ದೈವವಾದ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಕಳೆದ 2023ರ ಜಾತ್ರೆಯಲ್ಲಿ ನಡೆದ ಕೆಲವು ಅಚಾತುರ್ಯಗಳು ಈ ಬಾರಿ ಮರುಕಳಿಸಬಾರದೆಂದು ಸಮಸ್ತ ಭಕ್ತಾದಿಗಳು ಕಳಕಳಿ ವ್ಯಕ್ತಪಡಿಸಿದ್ದಾರೆ.

ಕಳೆದ ಜಾತ್ರೆಯಲ್ಲಿ ಅಮ್ಮನವರು ಹೊರಡುವ ವೇಳೆ ಕೈ ಮುಗಿದು ಪ್ರಾರ್ಥಿಸುವ ಭಕ್ತರಿಗಿಂತ, ಕೈ ಎತ್ತಿ ಗೊಂದಲ ಉಂಟುಮಾಡಿದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದದ್ದು ದೇವಿಯ ಅಪಚಾರಕ್ಕೆ ಕಾರಣವಾಯಿತು ಎಂಬ ಮಾತುಗಳು ಕೇಳಿಬಂದಿವೆ. ಈ ರೀತಿಯ ವರ್ತನೆಯಿಂದ ದೇವಿಯು ಬೇಜಾರಾಗಿರಬಹುದೆಂಬ ಭಾವನೆ ಭಕ್ತರಲ್ಲಿ ಮನೆಮಾಡಿದೆ.
ಈ ಅಚಾತುರ್ಯಕ್ಕೆ ಅಧಿಕಾರಿಗಳು ಮತ್ತು ಜಾತ್ರಾ ಸಮಿತಿಯವರಿಗಿಂತಲೂ ಹೆಚ್ಚಿನ ಹೊಣೆ ಭಕ್ತಮಹಾಶಯರ ಮೇಲೇ ಇದೆ ಎನ್ನುವುದು ಭಕ್ತರ ಅಭಿಪ್ರಾಯ. ಆದ್ದರಿಂದ ಈ ಬಾರಿ ಜಾತ್ರೆಯಲ್ಲಿ ಎಲ್ಲರೂ ಶಿಸ್ತಿನಿಂದ, ಸಂಪ್ರದಾಯಬದ್ಧವಾಗಿ ನಡೆದುಕೊಳ್ಳಬೇಕೆಂದು ವಿನಂತಿಸಲಾಗಿದೆ.

ಭಕ್ತರು ಮುಂದಿಟ್ಟಿರುವ ಪ್ರಮುಖ ಸಲಹೆಗಳು ಇಂತಿವೆ:
1) ತವರುಮನೆಯಲ್ಲಿ ನಡೆಯುವ ಧಾರ್ಮಿಕ ವಿಧಿಗಳು:
ಮಾರಿಕಾಂಬಾ ತಾಯಿಯನ್ನು ತವರುಮನೆಯಲ್ಲಿ ಕೂರಿಸುವ ಸಂದರ್ಭದಲ್ಲಿ ನಡೆಯುವ ಪುಣ್ಯಾಹವಾಚನ, ಪ್ರಾಣಪ್ರತಿಷ್ಠಾಪನೆ, ಮಹಾಪೂಜೆ, ಮಾಂಗಲ್ಯ ಧಾರಣೆ ಮೊದಲಾದ ಧಾರ್ಮಿಕ ವಿಧಿವಿಧಾನಗಳು ಯಾವುದೇ ಗೊಂದಲವಿಲ್ಲದೆ, ಶಾಂತಿಯುತವಾಗಿ ನಡೆಯಲು ಅವಕಾಶ ನೀಡಬೇಕು.

ಹಿಂದಿನ ಬಾರಿ ಗಣ್ಯಾತಿಗಣ್ಯರ ಆಗಮನ ಹಾಗೂ ನೂಕುನುಗ್ಗಲಿನಿಂದಾಗಿ ಶಾಸ್ತ್ರಗಳು ಸರಿಯಾಗಿ ನೆರವೇರದೆ ಅದರ ಪರಿಣಾಮವನ್ನು ಸಾಗರದ ಜನತೆ ಕಳೆದ ಮೂರು ವರ್ಷಗಳಿಂದ ಅನುಭವಿಸುತ್ತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ, ಎಲ್ಲರೂ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡುವುದನ್ನು ನಿರ್ಬಂಧಿಸಿ, ಕೆಲವೇ ಕೆಲವು ಅಧಿಕೃತ ಚಾನಲ್‌ಗಳಿಗೆ ಮಾತ್ರ ಚಿತ್ರೀಕರಣಕ್ಕೆ ಅವಕಾಶ ನೀಡಬೇಕು ಹಾಗೂ ಆ ಪ್ರದೇಶವನ್ನು ಮೊಬೈಲ್ ಮುಕ್ತ ವಲಯವನ್ನಾಗಿ ಘೋಷಿಸಬೇಕೆಂದು ಭಕ್ತರು ಒತ್ತಾಯಿಸಿದ್ದಾರೆ. ಇದರಿಂದ ನಿಜವಾದ ಭಕ್ತರಿಗೆ ನಿರಾಳ ಮನಸ್ಸಿನಿಂದ ದರ್ಶನ ಹಾಗೂ ಪ್ರಾರ್ಥನೆ ಮಾಡಲು ಅವಕಾಶ ಸಿಗಲಿದೆ.

2) ಅನಗತ್ಯ ಪ್ರವೇಶ ನಿರ್ಬಂಧ:
ಆಚರಣೆಗೆ ಅಗತ್ಯವಿರುವ ಪ್ರಮುಖ ವ್ಯಕ್ತಿಗಳನ್ನು ಹೊರತುಪಡಿಸಿ, ಉಳಿದವರು ಆ ಪ್ರದೇಶವನ್ನು ಮುಕ್ತವಾಗಿರಿಸಿ ದೇವಿಗೆ ಸಂತೋಷಪಡಿಸುವುದು ಮಹಾ ಪುಣ್ಯವೆಂದು ಭಕ್ತರು ತಿಳಿಸಿದ್ದಾರೆ.

3) ಹಣ್ಣುಕಾಯಿ ಮಾಡುವ ವೇಳೆ ಶಿಸ್ತು:
ಹಣ್ಣುಕಾಯಿ ಮಾಡುವ ಸಂದರ್ಭದಲ್ಲಿ ಸರದಿ ಸಾಲಿನಲ್ಲಿ ನಿಂತಿರುವ ವೃದ್ಧರು, ಎಳೆಯ ಮಕ್ಕಳು ಹಾಗೂ ಅಶಕ್ತರಿಗೆ ಮೊದಲ ಆದ್ಯತೆ ನೀಡಬೇಕು. ಅವರನ್ನು ಲೆಕ್ಕಿಸದೇ ಪ್ರಭಾವ ಬಳಸಿ ಮುನ್ನುಗ್ಗುವುದು ದೇವಿಗೆ ಇಷ್ಟವಾಗುವುದಿಲ್ಲ. ಮಾರಿಕಾಂಬಾ ತಾಯಿ ಸದಾ ದೀನದಲಿತರನ್ನು ಹಾಗೂ ಸಂಕಷ್ಟದಲ್ಲಿರುವವರನ್ನು ಮೊದಲಿಗೆ ಕಾಪಾಡುತ್ತಾಳೆ ಎಂಬ ನಂಬಿಕೆ ಇದೆ.

4) ರಾತ್ರಿ ದೇವಿಯ ಹೊರಡುವ ಸಮಯದಲ್ಲಿ ಕಟ್ಟುನಿಟ್ಟಿನ ಶಿಸ್ತು:
ರಾತ್ರಿ ಸಮಯದಲ್ಲಿ ಅಮ್ಮನವರು ಅತ್ಯಂತ ರೌದ್ರ ರೂಪದಲ್ಲಿ ಹೊರಡುವುದರಿಂದ, ಆ ಸಂದರ್ಭವನ್ನು ಯಾರೂ ಹಗುರವಾಗಿ ತೆಗೆದುಕೊಳ್ಳಬಾರದು. ಪೋತರಾಜರು ಹಾಗೂ ಅಸಾದಿಯವರಿಗೆ ತಮ್ಮ ಸಂಪ್ರದಾಯಗಳನ್ನು ಮುಕ್ತವಾಗಿ ಆಚರಿಸಲು ಅವಕಾಶ ನೀಡಬೇಕು. ಈ ವೇಳೆ ಪಾದರಕ್ಷೆ ಹಾಗೂ ಪದವಿಗಳನ್ನು ತ್ಯಜಿಸಿ, ದೇವಿಯ ಎದುರು ಸಂಪೂರ್ಣ ನಮ್ರತೆಯಿಂದ ವರ್ತಿಸಬೇಕು. ಇಲ್ಲವಾದಲ್ಲಿ ದೇವಿಯ ಕೋಪವನ್ನು ಸಹಿಸಲು ದೇವಾನುದೇವತೆಗಳಿಗೂ ಸಾಧ್ಯವಿಲ್ಲ ಎಂಬ ಎಚ್ಚರಿಕೆ ಭಕ್ತರಿಂದ ಕೇಳಿಬಂದಿದೆ.

ಈ ಬಾರಿ ಜಾತ್ರೆಯಲ್ಲಿ ಹಿಂದಿನ ತಪ್ಪುಗಳು ಮರುಕಳಿಸದೇ, ಶಿಸ್ತಿನಿಂದ ಮತ್ತು ಸಂಪ್ರದಾಯಬದ್ಧವಾಗಿ ಆಚರಣೆಗಳು ನಡೆಯಲಿ. ಇದರಿಂದ ಶ್ರೀ ಮಾರಿಕಾಂಬಾ ದೇವಿಯು ಸಂತೃಪ್ತಳಾಗಿ ಸಮಸ್ತ ಭಕ್ತರನ್ನು ಹರಸಿ ಕಾಪಾಡಲಿ ಎಂಬುದು ಸಾಗರದ ಭಕ್ತಾದಿಗಳ ಕಳಕಳಿ ವಿನಂತಿಯಾಗಿದೆ.

ವರದಿ : ಮೇಘನ ಗಣೇಶ್

Leave a Reply

Your email address will not be published. Required fields are marked *