ಡಿಸೆಂಬರ್ನಿಂದ ಪಶ್ಚಿಮ ಬಂಗಾಳದಲ್ಲಿ ಕೇವಲ ಎರಡು ನಿಪಾ ವೈರಸ್ ಪ್ರಕರಣಗಳು: ಆರೋಗ್ಯ ಸಚಿವಾಲಯ
ನವದೆಹಲಿ: ಕಳೆದ ವರ್ಷದ ಡಿಸೆಂಬರ್ನಿಂದ ಇದುವರೆಗೆ ಪಶ್ಚಿಮ ಬಂಗಾಳದಲ್ಲಿ ಕೇವಲ ಎರಡು ನಿಪಾ ವೈರಸ್ ರೋಗದ ದೃಢಪಟ್ಟ ಪ್ರಕರಣಗಳು ಮಾತ್ರ ವರದಿಯಾಗಿವೆ ಎಂದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC) ಸ್ಪಷ್ಟಪಡಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಬುಧವಾರ ತಿಳಿಸಿದೆ.
ಕೆಲವು ಮಾಧ್ಯಮಗಳಲ್ಲಿ ನಿಪಾ ವೈರಸ್ ಪ್ರಕರಣಗಳ ಬಗ್ಗೆ ಊಹಾಪೋಹದ ಮತ್ತು ತಪ್ಪಾದ ಅಂಕಿಅಂಶಗಳು ಹರಡುತ್ತಿರುವ ಹಿನ್ನೆಲೆ ಈ ಸ್ಪಷ್ಟೀಕರಣವನ್ನು ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಅಧಿಕೃತ ಹೇಳಿಕೆಯ ಪ್ರಕಾರ, ಎರಡು ಪ್ರಕರಣಗಳು ದೃಢಪಟ್ಟ ಬಳಿಕ ಸರ್ಕಾರವು ನಿಗದಿತ ಮಾರ್ಗಸೂಚಿಗಳಂತೆ ತಕ್ಷಣ ಹಾಗೂ ಸಮಗ್ರ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಕೈಗೊಂಡಿದೆ. ಈ ಪ್ರಕ್ರಿಯೆಯ ಭಾಗವಾಗಿ, ದೃಢಪಟ್ಟ ಪ್ರಕರಣಗಳಿಗೆ ಸಂಬಂಧಿಸಿದ 196 ಸಂಪರ್ಕಿತರನ್ನು ಗುರುತಿಸಿ, ಪತ್ತೆಹಚ್ಚಿ, ಮೇಲ್ವಿಚಾರಣೆ ನಡೆಸಿ ಹಾಗೂ ಪರೀಕ್ಷಿಸಲಾಗಿದೆ. ಅವರಲ್ಲಿ ಯಾರಿಗೂ ನಿಪಾ ವೈರಸ್ ಸೋಂಕು ದೃಢಪಟ್ಟಿಲ್ಲ.
ಇದುವರೆಗೆ ನಿಪಾ ವೈರಸ್ನ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಸಚಿವಾಲಯ ತಿಳಿಸಿದೆ. ಪರಿಸ್ಥಿತಿಯನ್ನು ನಿರಂತರವಾಗಿ ಗಮನದಲ್ಲಿಟ್ಟುಕೊಳ್ಳಲಾಗುತ್ತಿದ್ದು, ರೋಗದ ಹರಡುವಿಕೆಯನ್ನು ತಡೆಯಲು ಅಗತ್ಯವಿರುವ ಎಲ್ಲಾ ಸಾರ್ವಜನಿಕ ಆರೋಗ್ಯ ಕ್ರಮಗಳು ಜಾರಿಯಲ್ಲಿವೆ ಎಂದು ತಿಳಿಸಿದೆ.
ಸಾರ್ವಜನಿಕರು ಮತ್ತು ಮಾಧ್ಯಮಗಳು ಕೇವಲ ಅಧಿಕೃತ ಮೂಲಗಳಿಂದ ಬಿಡುಗಡೆಗೊಳ್ಳುವ ಪರಿಶೀಲಿತ ಮಾಹಿತಿಯನ್ನು ಮಾತ್ರ ನಂಬಬೇಕು ಹಾಗೂ ಅನಾವಶ್ಯಕ ಭೀತಿ ಉಂಟುಮಾಡುವ ದೃಢೀಕರಿಸದ ಅಥವಾ ಊಹಾತ್ಮಕ ವರದಿಗಳನ್ನು ಹರಡುವುದನ್ನು ತಪ್ಪಿಸಬೇಕು ಎಂದು ಸಚಿವಾಲಯ ಮನವಿ ಮಾಡಿದೆ.

ವರದಿ:- ಪ್ರವೀಣ್ ಶಿವಲಿಂಗಯ್ಯ




