ಸರ್ವಜ್ಞನೆಂದರೆ ಸುಜ್ಞಾನದ ಮಹಾಬೆಳಕು : ಸಾಹಿತಿ ಬನ್ನೂರು ರಾಜು

ಸರ್ವಜ್ಞನೆಂದರೆ ಸುಜ್ಞಾನದ ಮಹಾಬೆಳಕು : ಸಾಹಿತಿ ಬನ್ನೂರು ರಾಜು

ಮೈಸೂರು: ಜಾತಿ ಹೀನರ ಮನೆಯ ಜ್ಯೋತಿ ತಾ ಹೀನವೇ? ಜಾತಿ ವಿಜಾತಿ ಎನಬೇಡ ದೇವನೊಲಿದಾತನೇ ಜಾತಿ ಸರ್ವಜ್ಞ ಎಂದು ಜಗತ್ತಿಗೆ ಸಾರುತ್ತಾ ತಮ್ಮ ತ್ರಿಪದಿಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದವರು ತ್ರಿಪದಿಗಳಬ್ರಹ್ಮ ಸರ್ವಜ್ಞನೆಂದು ಪತ್ರಕರ್ತರೂ ಆದ ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.
ನಗರದ ಕೆ.ಆರ್.ಮೊಹಲ್ಲಾದ ಅಗ್ರಹಾರದ ಮಾಧವರಾವ್ ವೃತ್ತದಲ್ಲಿ ಮೈಸೂರು ಜಿಲ್ಲಾ ಕುಂಬಾರರ ಜಾಗೃತಿ ವೇದಿಕೆ ವತಿ ಯಿಂದ ಏರ್ಪಡಿಸಿದ್ದ ತ್ರಿಪದಿಗಳ ಬ್ರಹ್ಮ ಸರ್ವಜ್ಞ ಜಯಂತಿಯಲ್ಲಿ ಭಾಗವಹಿಸಿ ಮುಖ್ಯ ಭಾಷಣ ಮಾಡುತ್ತಿದ್ದ ಅವರು, ಸಂತ ಕವಿ, ಆಶುಕವಿ, ದೇವಕವಿ, ಸರ್ವಜ್ಞನು ಕಾಯಕ ಸಮಾಜವಾದ ಕುಂಬಾರ ಕುಲದಂತಹ ತಳ ಸಮುದಾಯ ದಲ್ಲಿ ಜನಿಸಿ ತಮ್ಮ ಮೇಲ್ಮಟ್ಟದ ಚಿಂತನೆಗಳಿಂದ ಸರ್ವಮಾನವ ಕುಲಕ್ಕೆ ಇಂದಿಗೂ ಸರ್ವಜ್ಞ ದಾರಿ ದೀಪವಾಗಿದ್ದಾರೆಂದರು.

ತೆಲುಗಿಗೆ ವೇಮನಕವಿ ಮತ್ತು ತಮಿಳಿಗೆ ತಿರುವಳ್ಳುವರ್ ಕವಿ ಹಾಗೂ ಹಿಂದಿಗೆ ಕವಿ ಕಬೀರರು ಹೇಗೋ ಹಾಗೆ ಕನ್ನಡಕ್ಕೆ ಸರ್ವಜ್ಞ ಕವಿಯಾಗಿದ್ದು ತಮ್ಮ ಪ್ರಕಾಂಡ ಜ್ಞಾನ ಪಾಂಡಿತ್ಯದಿಂದ ಅತ್ಯಂತ ಸರಳವೂ, ಸುಲಲಿತವೂ, ಅರ್ಥಪೂರ್ಣ ವೂ ಆದ ತ್ರಿಪದಿಗಳ ರಚನೆಗಳ ಮೂಲಕ ಕನ್ನಡ ಕಾವ್ಯ ಜಗತ್ತನ್ನು ಜ್ಞಾನ ಸೂರ್ಯನಾಗಿ ಬೆಳಗಿದ್ದಾರೆ. ಅಷ್ಟೇ ಅಲ್ಲದೆ ಜಗತ್ತಿಗೊಬ್ಬರೇ ಸರ್ವಜ್ಞನೆಂಬ ಕೀರ್ತಿಗೂ ಭಾಜನರಾಗಿದ್ದಾರೆ. ತಮ್ಮ ಸಹಸ್ರಾರು ತ್ರಿಪದಿಗಳಲ್ಲಿ ಜಗತ್ತಿಗೆ ಜ್ಞಾನಾಮೃತವನ್ನು ಉಣ ಬಡಿಸಿರುವ ಸರ್ವಜ್ಞ ಬಹು ದೊಡ್ದ ಸಮಾಜ ಸುಧಾರಕರೂ ಹೌದು. ಹತ್ತನೇ ಶತಮಾನದಲ್ಲಿ ನಮ್ಮ ಆದಿ ಕವಿ ಪಂಪ “ಮನುಷ್ಯ ಕುಲ ತಾನೊಂದೇ ವಲಂ ” ಎಂದರೆ, ಹನ್ನೆರಡನೇ ಶತಮಾನದಲ್ಲಿ ಬಸವಣ್ಣ “ಇವನಾರವ ಇವನಾರವ ನೆನ್ನದೆ ಇವ ನಮ್ಮವ ಇವ ನಮ್ಮವನೆಂದೆಣಿ ಸಯ್ಯ” ಎಂದರೆ, ಹದಿನಾರನೇ ಶತಮಾನದಲ್ಲಿ ಸರ್ವಜ್ಞನು “ನಡೆವುದೊಂದೇ ಭೂಮಿ, ಕುಡಿವುದೊಂದೇ ನೀರು, ಸುಡುವಗ್ನಿಯೊಂದೇ ಇರುತಿರಲು ಕುಲ ಗೋತ್ರ ನಡುವೆ ಎತ್ತಣದು” ಎಂದು ಇವರೂ ಸಹ ನಾವೆಲ್ಲರೂ ಒಂದೇ ಎಂಬ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದರೆಂದ ಅವರು, ಇಂಥ ಮಹಾ ಮಹಿಮನ ಬಗ್ಗೆ ಅಸ್ಪಷ್ಟತೆಗಳೇ ಹೆಚ್ಚಾಗಿರುವುದರಿಂದ ಸರ್ವಜ್ಞನ ಕುರಿತಂತೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯಬೇಕಾಗಿದೆ ಎಂದರು. ಇದಕ್ಕೂ ಮುನ್ನ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅವರು ಸರ್ವಜ್ಞನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸರ್ವಜ್ಞ ಜಯಂತಿಯನ್ನು ಉದ್ಘಾಟನೆ ಮಾಡಿದರು. ಆ ನಂತರ ಮಾತನಾಡಿದ ಅವರು “ಸರ್ವಜ್ಞ ನೆಂಬುವನು ಗರ್ವದಿಂದಾಗದೆ ಸರ್ವರೊಳಗೊಂದೊಂದು ನುಡಿ ಕಲಿತು ವಿದ್ಯೆಯ ಪರ್ವತವೇ ತಾನಾದ” ಎನ್ನುವ ಹಾಗೆ ಸರ್ವಜ್ಞ ನಾಡು ಕಂಡ ಮಹಾ ಜ್ಞಾನಿ,ಮಹಾದಾರ್ಶನಿಕ, ಎಲ್ಲಕ್ಕಿಂತ ಮುಖ್ಯವಾಗಿ ಮಹಾನ್ ಮಾನವತಾವಾದಿ ಆಗಿದ್ದು ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕೆಂದರು. ಇದೇ ವೇಳೆ ಸಾಹಿತಿ ಬನ್ನೂರು ರಾಜು, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತೆ ಡಾ.ರಮ್ಯಾ, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಬಾಲಕೃಷ್ಣ, ಕರ್ನಾಟಕ ಕಾವಲು ಪಡೆ ಅಧ್ಯಕ್ಷ ಮೋಹನ್ ಕುಮಾರ್ ಗೌಡ, ನಗರ ಪಾಲಿಕೆ ಮಾಜಿ ಸದಸ್ಯ ಪಾರ್ಥ ಸಾರಥಿ ಮುಂತಾದವರನ್ನು ಗೌರವಿಸಲಾಯಿತು.
ಮಡಿಕೇರಿಯ ಗ್ರಾಹಕ ಆಯೋಗದ ಅಧ್ಯಕ್ಷೆಯೂ ಆದ ಮೈಸೂರು ಜಿಲ್ಲಾ ಕುಂಬಾರರ ಜಾಗೃತಿ ವೇದಿಕೆಯ ಗೌರವಾಧ್ಯಕ್ಷೆ ಸಿ.ರೇಣುಕಾಂಬಾ ಅವರು ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ತೆರಿಗೆ ಆಯುಕ್ತೆ ಡಾ.ರಮ್ಯಾ, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಮೈಸೂರು ಜಿಲ್ಲಾ ಕುಂಬಾರರ ಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ್, ಉಪಾಧ್ಯಕ್ಷರಾದ ಉತ್ತನಹಳ್ಳಿ ಕೆ.ಶಂಕರ್, ವೆಂಕಟಾಚಲ, ಪ್ರಧಾನ ಕಾರ್ಯದರ್ಶಿ ನಾಗರಾಜ್, ಸಹ ಕಾರ್ಯದರ್ಶಿ ಮಹದೇವಸ್ವಾಮಿ, ಖಜಾಂಚಿ ಯಶವಂತ ಕುಮಾರ್, ಸಂಘಟನಾ ಕಾರ್ಯದರ್ಶಿ ಗಳಾದ ಎಂ. ಎಂ. ಯೋಗೇಶ್, ಶಿವರಾಜ್, ಲಕ್ಷ್ಮೀ ನಾರಾಯಣ, ವೆಂಕಟೇಶ್, ಸಿ. ನಾಗರಾಜ್, ಹೆಚ್.ಶ್ರೀನಿವಾಸ್, ನಿರ್ದೇಶಕರುಗಳಾದ ದಿನೇಶ್, ರಾಮಕೃಷ್ಣ, ಎನ್.ಕುಮಾರ್, ಸೋಮಶೇಖರ್, ಜಿ. ಯದು ನಂದನ್, ಕರ್ನಾಟಕ ಕಾವಲು ಪಡೆ ಅಧ್ಯಕ್ಷ ಎಂ. ಮೋಹನ್ ಕುಮಾರ್ ಗೌಡ, ನಗರಪಾಲಿಕೆ ಮಾಜಿ ಸದಸ್ಯ ಪಾರ್ಥಸಾರಥಿ, ಮೈಸೂರು ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ಉತ್ತನಹಳ್ಳಿ ಶಿವಣ್ಣ, ಕೆ.ಆರ್. ಬ್ಯಾಂಕ್ ಉಪಾಧ್ಯಕ್ಷ ಬಸಪ್ಪ , ಶ್ಯಾಮಸುಂದರ್, ಕಶ್ಯಪ, ಮುಂತಾದವರು ಭಾಗವಹಿಸಿದ್ದರು. ಎಲ್ಲರೂ ಸರ್ವಜ್ಞನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕೊನೆಯಲ್ಲಿ ಎಲ್ಲರಿಗೂ ಸಿಹಿ ವಿತರಿಸಲಾಯಿತು.

ವರದಿ :ನಂದಿನಿ ಮೈಸೂರು

https://whatsapp.com/channel/0029VaA61PAC6ZvhcEyEjS0S To Join Hind- Samachar What’s up Channel click the above link

ಕೇವಲ ಐದು ತಿಂಗಳ ಕಾಲಾವಧಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಸಾರ್ಹ ಕಂಪನಿ .ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್ – ಟೆಕ್ ಇಂಟರ್ ನ್ಯಾಷನಲ್(cem-tech international construction).ಸಂಪರ್ಕಿಸಿ: 9916432555 ,9986432555

Leave a Reply

Your email address will not be published. Required fields are marked *